ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಕಾಲೆ, ಮಹಮ್ಮದೀಯನ್, ಮಾರ್ಕ್ಸ್ ಶಿಕ್ಷಣ ವ್ಯವಸ್ಥೆಗಳಿಂದಾಗಿ ನಮ್ಮತನವನ್ನೇ ಮರೆತು ಅಭಿಮಾನ ಶೂನ್ಯರಾಗಿರುವ ನಾವು ಈ ನೆಲದ ಸತ್ವ ತಿಳಿಸುವ ಶಿಕ್ಷಣವನ್ನು ಶಾಲಾ-ಕಾಲೇಜು, ಮನೆಗಳಲ್ಲಿ ನೀಡಬೇಕಾಗಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ವಿಶೇಷ ಆಮಂತ್ರಿತ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಶನಿವಾರ ಎಬಿವಿಪಿಯಿಂದ ವೀರ ರಾಣಿ ಅಬ್ಬಕ್ಕನವರ 500ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಣಿ ಅಬ್ಬಕ್ಕ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಈ ನೆಲದ ಸತ್ವ ತಿಳಿಸುವ ಶಿಕ್ಷಣವು ಶಾಲಾ-ಕಾಲೇಜು-ಮನೆಗಳಲ್ಲಿ ಇಂದು ನಮ್ಮ ಮಕ್ಕಳು, ವಿದ್ಯಾರ್ಥಿ, ಯುವಜನರಿಗೆ ಸಿಗಬೇಕಾಗಿದೆ ಎಂದರು.
ಬ್ರಿಟಿಷರು ಸುಧೀರ್ಘ ಅವದಿಗೆ ಭಾರತವನ್ನು ಆಳುವ ದುರುದ್ದೇಸದಿಂದ ಲಾರ್ಡ್ ಮೆಕಾಲೆ ಮೂಲಕ ತಂದ ಶಿಕ್ಷಣ ಪದ್ಧತಿಯಿಂದಾಗಿ ಸ್ವಾಭಿಮಾನವನ್ನೇ ಕಳೆದುಕೊಂಡಿದ್ದೇವೆ. ವಿಜ್ಞಾನ, ತಂತ್ರಜ್ಞಾನವೆಲ್ಲಾ ಬೇರೆ ದೇಶಗಳಿಂದ ಬಂದಿದೆಯೆಂಬ ಭ್ರಮೆಯಲ್ಲಿದ್ದೇವೆ. ಸ್ವಾತಂತ್ರ್ಯಾ ನಂತರವೂ ಭಾರತೀಯತೆಯನ್ನು ಜಾಗೃತಗೊಳಿಸುವ ಶಿಕ್ಷಣ ವ್ಯವಸ್ಥೆ ಜಾರಿಯಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಾರ್ಡ್ ಮೆಕಾಲೆ ನಂತರ ದೇಶದ ಮೊದಲ 3-4 ಜನ ಶಿಕ್ಷಣ ಮಂತ್ರಿಗಳಾಗಿದ್ದವರು ಮಹಮ್ಮದೀಯನ್ ಶಿಕ್ಷಣ ಜಾರಿಗೊಂಡಿತು. ಆ ನಂತರ ಮಾರ್ಕ್ಸ್ ಶಿಕ್ಷಣವಾಯಿತು. ಪ್ರಸ್ತುತ ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮಹರ್ಷಿ ಶಿಕ್ಷಣ ಜಾರಿಗೆ ತಂದಿದ್ದು ಆಶಾದಾಯಕ ಸಂಗತಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಹೆಣ್ಣುಮಕ್ಕಳು ಸಹ ಹೋರಾಟ ನಡೆಸಿದ್ದಾರೆ. ಆದರೆ, ಆ ಎಲ್ಲರ ಬಗ್ಗೆ ಇಂದಿನ ಮಕ್ಕಳಿಗೆ ಅರಿವೇ ಇಲ್ಲ ಎಂದು ವಿಷಾದಿಸಿದರು.ರಥಯಾತ್ರೆಗೆ ಚಾಲನೆ ನೀಡಿದ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಮಾತನಾಡಿ, ಹೆಣ್ಣುಮಕ್ಕಳು ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಕಾಲದ
ಲ್ಲೇ ರಾಣಿ ಅಬ್ಬಕ್ಕ ವಸಾಹತುಶಾಹಿಗಳ ವಿರುದ್ಧ ಹೋರಾಡಿದವರು. 16ನೇ ಶತಮಾನದಲ್ಲಿ ಪೋರ್ಚಗೀಸರ ಅಧಿಪತ್ಯಕ್ಕೆ ಸವಾಲೊಡ್ಡಿ, ಕರಾವಳಿಯ ಸ್ವಾತಂತ್ರ್ಯವನ್ನು ರಕ್ಷಿಸಿದ ವೀರನಾರಿ. ಆರಂಭದಲ್ಲಿ ಹಿನ್ನಡೆಯಾದರೂ ಪತಿಯ ವಿರೋಧವನ್ನೂ ಲೆಕ್ಕಿಸದೇ, ಸೈನ್ಯ ಸಂಘಟಿಸಿ ವಿಜಯಶಾಲಿಯಾದವರು ರಾಣಿ ಅಬ್ಬಕ್ಕ ಎಂದರು.ಪದ್ಮಶ್ರೀ ಪುರಸ್ಕೃತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಕಮಲೇಶ್, ಕರ್ನಾಟಕ ದಕ್ಷಿಣ ಪ್ರಾಂತ್ಯ ವಿದ್ಯಾರ್ಥಿನಿ ಪ್ರಮುಖ್ ಸುಧಾ ಶೆಣೈ, ಪ್ರಾಂತ್ಯ ಕಾರ್ಯದರ್ಶಿ ಎಚ್.ಕೆ.ಪ್ರವೀಣ, ಮುಖಂಡರಾದ ಪ್ರದೀಪ ಕಾರಂತ್, ಸಾ.ರಾ.ವಿರೂಪಾಕ್ಷ, ಎಂ.ಕೆ.ಪಲ್ಲವಿ ಇತರರು ಇದ್ದರು.