ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ

KannadaprabhaNewsNetwork | Published : Nov 14, 2024 12:55 AM

ಸಾರಾಂಶ

ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.ಸರ್ಜಿ ಫೌಂಡೇಶನ್‌ ಹಾಗೂ ರೌಂಡ್‌ ಟೇಬಲ್‌ ವತಿಯಿಂದ ನಗರದ ಕಂಟ್ರಿಕ್ಲಬ್ ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಬುದ್ಧಿಮಾಂದ್ಯರು ಹಾಗೂ ವಿಶೇಷಚೇತನರ “ಕಿಡ್ಸ್ ಫಿಯೆಸ್ಟಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೌಂಡ್ ಟೇಬಲ್ ಘಟಕವು ಸರ್ಕಾರದ ಜೊತೆಗೆ ಸೇರಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುತ್ತಾ, ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ. ಹಾಗೆಯೇ ವಿಶೇಷಚೇತನ ಮಕ್ಕಳ ಕೊರತೆ ನೀಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವಿಧಾನ ಪರಿಷತ್ ಶಾಸಕರು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಇಡೀ ಭಾರತದಲ್ಲಿ ಪ್ರತಿ ದಿನ ಸರಾಸರಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ಮಾಡುತ್ತಿರುವ ರೌಂಡ್ ಟೇಬಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಯಲ್ಲಿ ನಾನೂ ಒಬ್ಬ ಸದಸ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹೆಸರಾಂತ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ.ಪಿ. ನಾರಾಯಣ್, ಖ್ಯಾತ ನರರೋಗ ತಜ್ಞರು ಹಾಗೂ ಅಭಿರುಚಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಶಿವರಾಮಕೃಷ್ಣ, ಖ್ಯಾತ ಮನೋರೋಗ ತಜ್ಞರಾದ ಡಾ.ಕೆ. ಆರ್ ಶ್ರೀಧರ್, ಕಂಟ್ರಿಕ್ಲಬ್ ನ ಉಪಾಧ್ಯಕ್ಷರಾದ ಚುಡಾಮಣಿ ಪವಾರ್, ಕಾರ್ಯಕ್ರಮದ ಸಂಚಾಲಕರಾದ ಡಾ. ಸ್ವರೂಪ್ ಮಲ್ಲೇಶ್, ಶ್ರದ್ದಿತ್, ರೌಂಡ್ ಟೇಬಲ್ ಛೇರ್ಮನ್ ಆದಿತ್ಯ ಆಚಾರ್ಯ, ವೈಸ್ ಛೇರ್ಮನ್ ಈಶ್ವರ್ ಸರ್ಜಿ, ಕಾರ್ಯದರ್ಶಿ ಗುರು ಹಂಜಿ ಮತ್ತಿತರರು ಹಾಜರಿದ್ದರು.

ಮನಗೆದ್ದ ವಿಶೇಷ ಚೇತನ ಮಕ್ಕಳು ಶಾರದಾ ಅಂಧರ ವಿಕಾಸ, ಸರ್ಜಿ ಇನ್‌ಸ್ಟಿಟ್ಯೂಟ್‌ನ ಬುದ್ಧಿಮಾಂದ್ಯ ಮಕ್ಕಳು, ತರಂಗ ಶಾಲೆಯ ಕಿವುಡ ಮತ್ತು ಮೂಗ ಮಕ್ಕಳು, ಹ್ಯಾಪಿ ಹೋಂನ ವಿಕಲಚೇತನರು, ಮಾದವನೆಲೆಯ ಅನಾಥ ಮಕ್ಕಳು ಹಾಗೂ ತಾಯಿ ಮನೆಯ 170 ಕ್ಕೂ ಮಕ್ಕಳು ಭಾಗವಹಿಸಿ, ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಹಾಡು, ಡ್ಯಾನ್ಸ್ ಹಾಗೂ ಕಾಟನ್‌ ಕ್ಯಾಂಡಿ, ಚಾಕೋಲೇಟ್‌ ಫೌಂಟೆನ್‌ , ಜಂಪಿಂಗ್‌ ಕ್ಯಾಸಲ್ ಹೀಗೆ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಅಮೋಘವಾಗಿ ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ವಿವಿಧ ತಿನಿಸುಗಳನ್ನು ಸವಿದು ಸಂತಸಪಟ್ಟರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

Share this article