ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಮಡಿಕೇರಿ ದಸರಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತ ‘ಮಕ್ಕಳ ದಸರಾ ಉತ್ಸವ’ಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ವೇಗಿ ಅವರು ಛದ್ಮವೇಷಧಾರಿ ಪುಟಾಣಿ ಮಕ್ಕಳೊಂದಿಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತ ‘ಮಕ್ಕಳ ದಸರಾ ಉತ್ಸವ’ಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ವೇಗಿ ಅವರು ಛದ್ಮವೇಷಧಾರಿ ಪುಟಾಣಿ ಮಕ್ಕಳೊಂದಿಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರ ತರುವ ನಿಟ್ಟಿನ ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾದ ಮಕ್ಕಳ ದಸರಾ ಆಯೋಜನೆ ಶ್ಲಾಘನೀಯ. ದಸರಾ ಉತ್ಸವದ ಸಂದರ್ಭ ಮತ್ತೆಲ್ಲೂ ಕಂಡು ಬಾರದ ಮಕ್ಕಳ ದಸರಾವನ್ನು ಮಡಿಕೇರಿಯಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುವುತ್ತಿರುವುದು ಉತ್ತಮವಾದ ಪ್ರಯತ್ನ. ತಾನು ತನ್ನ ಸರ್ಕಾರಿ ಸೇವೆಯಲ್ಲಿ ಇತರೆಡೆಗಳಿಗೆ ತೆರಳಿದಲ್ಲಿ ಅಲ್ಲಿಯೂ ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ, ಕಳೆದ ಒಂದು ದಶಕದಿಂದ ಮಕ್ಕಳ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಉತ್ಸವದಲ್ಲಿ ಪಾಲ್ಗೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ವೈವಿಧ್ಯಮಯ ಕಾರ್ಯಕ್ರಮಳನ್ನು ಒಳಗೊಂಡ ಮಕ್ಕಳ ದಸರಾ ಮಕ್ಕಳ ಪ್ರತಿಭಾ ಅನಾವರಣಕ್ಕೆ ಸುವರ್ಣ ಅವಕಾಶವಾಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಮಡಿಕೇರಿ ದಸರಾ ಉತ್ಸವದ ಹಿನ್ನೆಲೆ ಮಕ್ಕಳ ದಸರಾ, ಜಾನಪದ ದಸರಾ, ಮಹಿಳಾ ದಸರಾ, ಯುವ ದಸರಾ, ಕ್ರೀಡಾ ದಸರಗಳನ್ನು ಆಯೋಜಿಸುವ ಮೂಲಕ ನಿಜ ಅರ್ಥದಲ್ಲಿ ದಸರಾವನ್ನು ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳ ದಸರಾ ಆಯೋಜಿಸುತ್ತಿರುವ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ಮುಂಬರುವ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವಂತಾಗಲೆಂದು ಹಾರೈಸಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ದಶಕದ ಹಿಂದೆ ಮಡಿಕೇರಿ ದಸರಾ ಉತ್ಸವದ ಸಂದರ್ಭ ಮಕ್ಕಳಿಗೆ ವೇದಿಕೆ ಒದಗಿಸುವ ‘ಮಕ್ಕಳ ದಸರಾ’ವನ್ನು ಈಗಿನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಅವರು ಪ್ರಪ್ರಥಮ ಬಾರಿಗೆ ರೂಪಿಸಿದ್ದನ್ನು ಸ್ಮರಿಸಿಕೊಂಡರು. ರೋಟರಿ ಸಹಾಯಕ ರಾಜ್ಯಪಾಲ ದೇವಣಿರ ತಿಲಕ್ ಶುಭ ಹಾರೈಸಿದರು. ರೋಟರಿ ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ದಸರಾ ವೇದಿಕೆ ಸಮಿತಿ ಅಧ್ಯಕ್ಷ ಕನ್ನಂಡ ಸವಿತ, ದಸರಾ ಸಮಿತಿ ಖಜಾಂಜಿ ಅರುಣ್ ಶೆಟ್ಟಿ ಮೊದಲಾದವರಿದ್ದರು. ಪುಟಾಣಿಗಳಾದ ಸುಮಿಧಿ, ಅಧಿತಿ, ಶಾರ್ವರಿ ಪ್ರಾರ್ಥಿಸಿದರು.ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ ರೈ ವಂದಿಸಿದರು.

Share this article