ಕನ್ನಡಪ್ರಭ ವಾರ್ತೆ ಮೈಸೂರು
ಫುಡ್ ಕೋರ್ಟ್ ಗಳಲ್ಲಿ ಕೆಲಸ ಮಾಡುವ ಬಾಲ ಕಾರ್ಮಿಕರು ಅಲ್ಲಿಯೇ ತಿನ್ನುತ್ತಾರೆ, ಆಹಾರದ ಗುಣಮಟ್ಟದ ಕುರಿತು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಕಳವಳ ವ್ಯಕ್ತಪಡಿಸಿದರು.ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು, ಯೂನಿಸೆಫ್ ಜತಗೆಗೂಡಿ ವಿಜ್ಞಾನ ಭವನದಲ್ಲಿ ಹದಿಹರೆಯದವರ ಆರೋಗ್ಯ, ಪೌಷ್ಟಿಕತೆ: ಸಾಂಕ್ರಾಮಿಕವಲ್ಲದ ಕಾಯಿಲೆ ಮತ್ತು ರಸ್ತೆ ಸುರಕ್ಷತೆ ಕುರಿತು ರಾಜ್ಯದ ಪತ್ರಕರ್ತರಿಗೆ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಬದುಕು ಇಂದು ಮುದುಡುತ್ತಿದೆ. ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳು ಬಳಲುತ್ತಿದ್ದಾರೆ. ಅನೇಕ ಮಕ್ಕಳು ಫುಡ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ತಿನ್ನುತ್ತಿದ್ದಾರೆ. ಪೋಷಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೆಲಸ ಮಾಡುವುದರಿಂದ ಆರ್ಥಿಕತೆ ವೃದ್ಧಿಯಾಗಬಹುದು. ಆದರೆ ಗಂಭೀರ ಕಾಯಿಲೆಯಿಂದ ಬಳಲುವಂತಾಗಿದೆ. ನಾವು ಸೇವಿಸುವ ಆಹಾರ ಉತ್ಕೃಷ್ಟವಾಗಿರಬೇಕು. ಕೆಲವೊಂದು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಸರ್ವೆ ಮಾಡಬೇಕು ಎಂದರು.ಅನೇಕ ಕೆಲಸಗಳ ಕುರಿತು ಯೂನಿಸೆಫ್ ಬೆಳಕು ಚೆಲ್ಲುತ್ತದೆ. ಪತ್ರಿಕೋದ್ಯಮ ಬಾಲಪರಾಧದ ಬಗ್ಗೆಯೂ ಮಾಹಿತಿ ನೀಡುತ್ತಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿದೆ. ಯುವ ಸಮೂಹ ರಸ್ತೆ ಅಪಘಾತದ ಮೂಲಕ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಸಿ.ಎಫ್, ಟಿ,ಆರ್.ಐ ಹಾಗೂ ಡಿ.ಎಫ್.ಆರ್.ಎಲ್ ಇದ್ದರೂ ಆಹಾರ ಸುರಕ್ಷತೆ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ. ಇದು ಹೀಗೆಯೇ ಮುಂದುವರೆದರೆ ಅವರ ಭವಿಷ್ಯದಲ್ಲಿ ಗಂಭೀರ ಕಾಯಿಲೆ ಕಾಡಬಹುದು. ಪೋಷಕರು ತಲೆ ಕೆಡಸಿಕೊಳ್ಳುತ್ತಿಲ್ಲ. ಪ್ಯಾಕಿಂಗ್ ಆಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಜತಗೆ ಈ ಆಹಾರಕ್ಕೆ ಬಣ್ಣವನ್ನೂ ಹಾಕುತ್ತಾರೆ ಎಂದರು.ಇನ್ನು ವಾಹನ ಅಪಘಾತದಲ್ಲಿ ಸಾಕಷ್ಟು ಮಂದಿ ಮೃತಪಡುತ್ತಿರುವುದೂ ಕೂಡ ಕಳವಳಕಾರಿ ಸಂಗತಿ. ನಮ್ಮಲ್ಲಿ ಶೇ. 50ರಷ್ಟು ಮಂದಿ ವಿದ್ಯಾವಂತರಲ್ಲ. ವಿದ್ಯಾವಂತರು ಈ ಬಗ್ಗೆ ಆಲೋಚಿಸಬೇಕು. ರಸ್ತೆ ದಾಟುವಾಗ ಸುರಕ್ಷತೆ ನಿಯಮ ಪಾಲಿಸುವುದಿಲ್ಲ. ಹೆಲ್ಮೆಟ್ ಧರಿಸದೆ, ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುವುದರಿಂದಲೂ ಸಾಕಷ್ಟು ತೊಂದರೆ ಆಗುತ್ತದೆ ಎಂದರು.
ಯೂನಿಸೆಫ್‌ನ ಮುಖ್ಯಸ್ಥ ಡಾ. ಝಲಲೆಂ ಟಫೆಸ್ಸೆ ಮಾತನಾಡಿ, ಮಕ್ಕಳ ಪ್ರಾಮುಖ್ಯತೆ ಯಾರಿಗೂ ಅರ್ಥ ಆಗುತ್ತಿಲ್ಲ. ಮಕ್ಕಳ ಮಹತ್ವವನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ನಾಳಿನ ಉತ್ತಮ ಭವಿಷ್ಯಕ್ಕಾಗಿ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ. ಹಲವು ಸ್ಥಳಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಉತ್ತಮ ಆಹಾರದ ಕೊರತೆ ಕಾಡುತ್ತಿದೆ ಎಂದರು.ಅನೇಕ ಸವಾಲು ಎದುರಿಸುತ್ತಿದ್ದಾರೆ. 35ರಷ್ಟು ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್ ಸೇವನೆಯಿಂದ ಹೆಚ್ಚಿನ ಮಕ್ಕಳು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ವ್ಯಾಯಾಮ, ಚಟುವಟಿಕೆ ಇಲ್ಲದ ಜೀವನ ನಡೆಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರು.
ಯೂನಿಸೆಫ್ ನ ಪ್ರಸೂನ್ ಸೇನ್ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ವಿಶ್ವವೇ ಗಂಭೀರವಾಗಿ ಆಲೋಚಿಸಬೇಕಿದೆ. ಅಪಘಾತಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ ಎಂದರು.ವಿಭಾಗದ ಮುಖ್ಯಸ್ಥೆ ಪ್ರೊ.ಎನ್. ಮಮತಾ ಮಾತನಾಡಿ, ಪತ್ರಿಕೋದ್ಯಮವು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ವಿದ್ಯುನ್ಮಾನ ಮಾಧ್ಯಮವೂ ಇದರ ಬಗ್ಗೆ ಪ್ರಚುರಪಡಿಸಬೇಕಿದೆ. ಇಂದಿನ ಚರ್ಚಿತ ವಿಷಯಗಳನ್ನು ಕೇಂದ್ರೀಕರಿಸಬೇಕು ಎಂದರು.
ಕಾರ್ಯಕ್ರಮ ಸಂಯೋಜಕಿ ಪ್ರೊ.ಎಂ.ಎಸ್. ಸಪ್ನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಂಜುನಾಥ್ ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಆಯ್ದ ಪತ್ರಕರ್ತರು ಪಾಲ್ಗೊಂಡಿದ್ದಾರೆ.