ಮೈಸೂರು ಜಿಲ್ಲೆಯ ಏಳು ಗ್ರಾಮಗಳಲ್ಲಿ ಮಾದರಿ ಸೌರ ಗ್ರಾಮ ಸ್ಪರ್ಧೆ

KannadaprabhaNewsNetwork |  
Published : Aug 22, 2025, 12:00 AM IST
ಜಿಲ್ಲೆಯ ಏಳು ಗ್ರಾಮಗಳಲ್ಲಿ ಮಾದರಿ ಸೌರ ಗ್ರಾಮ ಸ್ಪರ್ಧೆ | Kannada Prabha

ಸಾರಾಂಶ

ಮೈಸೂರು ಜಿಲ್ಲೆಯ ಏಳು ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಾದರಿ ಸೌರ ಗ್ರಾಮ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಆಯ್ಕೆ ಮಾಡಲಾಗಿದ್ದು, ಅಂತಿಮಾಗಿ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) 1 ಕೋಟಿ ರು. ಪ್ರೋತ್ಸಾಹಧನ ಲಭಿಸಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲೆಯ ಏಳು ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಾದರಿ ಸೌರ ಗ್ರಾಮ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಆಯ್ಕೆ ಮಾಡಲಾಗಿದ್ದು, ಅಂತಿಮಾಗಿ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) 1 ಕೋಟಿ ರು. ಪ್ರೋತ್ಸಾಹಧನ ಲಭಿಸಲಿದೆ.

ಮೈಸೂರಿನ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ (ಡಿಎಲ್‌ಸಿ) ಸಭೆಯಲ್ಲಿ ಏಳು ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ವರಕೊಡು, ಬಿಳಿಕೆರೆ, ಗಂಧನಹಳ್ಳಿ, ಸಾಲಿಗ್ರಾಮ, ತಾಂಡವಪುರ, ಮೂಗೂರು ಮತ್ತು ಬೆಟ್ಟದಪುರ ಗ್ರಾಮಗಳನ್ನು ಮಾದರಿ ಸೌರ ಗ್ರಾಮ ಯೋಜನೆಯ ಸ್ಪರ್ಧಾ ಗ್ರಾಮಗಳೆಂದು ಗುರುತಿಸಲಾಗಿದೆ.

ಸ್ಪರ್ಧಾ ಅವಧಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಗಳ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ವಸತಿ ಮನೆಗಳಿಗೆ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಸುವುದು. ಇತರ ಗ್ರಾಹಕರಿಗೆ ಸಬ್ಸಿಡಿ ರಹಿತ ಯೋಜನೆ ಅಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗೆ ಪ್ರೋತ್ಸಾಹ ನೀಡುವುದು. ನೀರಾವರಿ ಪಂಪ್‌ಸೆಟ್‌ಗಳಿಗೆ ಪಿಎಂ-ಕುಸುಮ್‌ಯೋಜನೆ ಅಡಿಯಲ್ಲಿ ಅನುಷ್ಠಾನಕ್ಕೆ ಪ್ರೋತ್ಸಾಹಿಸುವುದು. ಸರ್ಕಾರಿ ಕಟ್ಟಡಗಳ ಮೇಲೆ ಸೌರ ಶಕ್ತಿ ಅಳವಡಿಸುವುದು (ಅಳವಡಿಕೆಗೆ ಅನುದಾನವನ್ನು ಪಿಪಿಪಿ/ಆರ್‌ಸಿಎಸ್‌ಸಿಒ/ ಬಜೆಟ್‌ನಲ್ಲಿ ಅನುದಾನ), ಕುಡಿಯುವ ನೀರಿನ ಹಾಗೂ ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸುವುದು.

ಈ ಸ್ಪರ್ಧೆಯು ಪ್ರಸಕ್ತ ವರ್ಷದ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ನಡೆಯಲಿದ್ದು, ಸ್ಪರ್ಧೆಯ ಅಂತ್ಯದಲ್ಲಿ ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ ನವೀಕರಿಸಬಹುದಾದ ಇಂಧನ ಬಳಸಿದ ಗ್ರಾಮವನ್ನು ಮಾದರಿ ಸೌರ ಗ್ರಾಮ ಎಂದು ಘೋಷಿಸಲಾಗುವುದು. ಹೀಗೆ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ 1 ಕೋಟಿ ರು. ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ಸರಬರಾಜು ನಿಗಮದ (ಸೆಸ್ಕ್‌) ದ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಲ್ಪಕಲಾ ಅಕಾಡೆಮಿ ಗೌರವ-ಶಿಲ್ಪಶ್ರೀ ಪ್ರಶಸ್ತಿ ಪ್ರಕಟ
ಹಿರಿಯ ಕವಿಗಳ ಬರಹದಿಂದ ಹೆಚ್ಚು ಪ್ರಭಾವಿತ: ಪ್ರೊ.ರಂಗಸ್ವಾಮಿ