ಮಾರುಕೇರಿ ಗ್ರಾಪಂ ವತಿಯಿಂದ ಮಕ್ಕಳ ಗ್ರಾಮಸಭೆ
ತಾಲೂಕಿನ ಕೋಟಖಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರುಕೇರಿ ಗ್ರಾಪಂನಿಂದ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳ ಸಮಸ್ಯೆ ಆಲಿಸಲಾಯಿತು.
ಸಭೆಯಲ್ಲಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಶಾಲೆ ಮತ್ತು ವಾರ್ಡ್ ಮಟ್ಟದ ಸಮಸ್ಯೆಗಳು, ಅಗತ್ಯಗಳು ಮತ್ತು ಸಲಹೆಗಳನ್ನು ಮಂಡಿಸಿದರು. ಮಕ್ಕಳೇ ಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಕಾರ್ಯನಿರ್ವಹಿಸಿ ನಾಯಕತ್ವ ಪ್ರದರ್ಶಿಸಿದರು.ಪಿಡಿಒ ಉದಯ ಬೋರ್ಕರ್ ಮಾತನಾಡಿ, ಮಕ್ಕಳಸ್ನೇಹಿ ಗ್ರಾಪಂ ಅಭಿಯಾನದಲ್ಲಿ ಕೈಗೊಳ್ಳಲಾದ ಚಟುವಟಿಕೆ ಕುರಿತು ವಿವರಿಸಲು ‘ಮಕ್ಕಳ ದನಿ ಪೆಟ್ಟಿಗೆ’ ತೆರೆಯಲಾಗಿದ್ದು, ಮಕ್ಕಳಿಂದ ಬಂದ ಮನವಿಗಳು ಮತ್ತು ಪ್ರಶ್ನೆಗಳ ಕುರಿತು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ ಮಾತನಾಡಿ, ಮಕ್ಕಳ ಗ್ರಾಮಸಭೆಯಿಂದ ಮಕ್ಕಳ ಸಮಸ್ಯೆಗಳನ್ನು ತಿಳಿಯಲು ಸಹಾಯವಾಗಿದೆ. ಮಕ್ಕಳಿಂದ ಬಂದ ಎಲ್ಲ ಸಮಸ್ಯೆಗಳನ್ನು ಕ್ರೋಡೀಕರಿಸಿ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಲಾಗುವುದು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಕ್ರೀಡಾ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.