ಮಕ್ಕಳಿಗೆ ದೇಸಿ ಕಲೆಗಳ ಅರಿವು ಮೂಡಿಸಬೇಕು

KannadaprabhaNewsNetwork | Published : Nov 24, 2024 1:45 AM

ಸಾರಾಂಶ

ಭಾರತೀಯ ವಿಚಾರಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕಿವೆ. ಸಾಂಸ್ಕೃತಿಕ ಸ್ಪರ್ಧೆಗಳು ಭಾರತದ ನಾನಾ ಬಗೆಯ ಸಂಸ್ಕೃತಿಗಳನ್ನು ಪರಿಚಯಿಸುವ ನೆಲೆಯಲ್ಲಿ ಮತ್ತಷ್ಟು ವಿಸ್ತಾರವನ್ನು ಕಾಣಬೇಕಿವೆ. ಶಿಕ್ಷಣದ ಮೂಲಕ ನಾವು ಬೆಳೆದು ಸಮಾಜವನ್ನೂ ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಕಲಿಕೆ ಎರಡು ವೃದ್ಧಿಯಾಗಲು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಸಹಕಾರಿಯಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಶ್ರೀ ಮಂಗಳನಾಥ ಸ್ವಾಮಿಜಿ ತಿಳಿಸಿದರು.ನಗರದ ಹೊರವಲಯದಲ್ಲಿರುವ ಬಿ.ಜಿ.ಎಸ್.ಪ.ಪೂ. ಕಾಲೇಜಿನ ಆವರಣದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಚಿಕ್ಕಬಳ್ಳಾಪುರ ಮತ್ತು ಬಿ.ಜಿ.ಎಸ್. ಪ.ಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕೌಶಲ ಅಳವಡಿಸಿಕೊಳ್ಳಿ

ಭಾರತೀಯ ವಿಚಾರಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕಿವೆ. ಸಾಂಸ್ಕೃತಿಕ ಸ್ಪರ್ಧೆಗಳು ಭಾರತದ ನಾನಾ ಬಗೆಯ ಸಂಸ್ಕೃತಿಗಳನ್ನು ಪರಿಚಯಿಸುವ ನೆಲೆಯಲ್ಲಿ ಮತ್ತಷ್ಟು ವಿಸ್ತಾರವನ್ನು ಕಾಣಬೇಕಿವೆ. ಶಿಕ್ಷಣದ ಮೂಲಕ ನಾವು ಬೆಳೆದು ಸಮಾಜವನ್ನೂ ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ಅಗತ್ಯ ಕೌಶಲ ಅಳವಡಿಸಿಕೊಂಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.ಕಾಲೇಜಿನ ಮುಖ್ಯಸ್ಥರು ಎಂ.ವಿ.ಚಿಕ್ಕಜ್ಜಪ್ಪ ಮಾತನಾಡಿ, ಪ್ರತಿಯೊಂದು ಸ್ಪರ್ಧೆಯಲ್ಲೂ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಗೆಲುವಿನ ನಿರೀಕ್ಷೆಯಲ್ಲಿ ಭಾಗವಹಿಸಬೇಕು. ಅನಿರೀಕ್ಷಿತವಾಗಿ ಎದುರಾಗುವ ಸೋಲನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಸೋಲು ಮುಂದಿನ ಗೆಲುವಿಗೆ ಮೆಟ್ಟಿಲು ಎಂಬುದನ್ನ ಅರಿತು ವ್ಯಾಸಂಗವನ್ನು ಮುಂದುವರಿಸಬೇಕು ಎಂದು ಹೇಳಿದರು.

500ಕ್ಕೂ ಹೆಚ್ಚು ಸ್ಪರ್ಧಿಗಳುಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹನ್ನೊಂದು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಸೇರಿದಂತೆ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ರಸಪ್ರಶ್ನೆ, ಆಶುಭಾಷಣ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯ 35ಪದವಿ ಪೂರ್ವ ಕಾಲೇಜುಗಳಿಂದ 500ಕ್ಕೂಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದುತಿಳಿಸಿದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಆದಿಶೇಷರಾವ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನೆರವೇರಿಸುತ್ತಿದೆ. ವಿದ್ಯಾರ್ಥಿಗಳು ತಮಗೆ ದೊರಕುವ ವೇದಿಕೆಗಳನ್ನು ಸದ್ವಿನಿಯೋಗ ಮಾಡಿಕೊಂಡು ಮುನ್ನಡೆಯಬೇಕು ಎಂದರು.ವಿಜೇತರಿಗೆ ಬಹುಮಾನ ವಿತರಣೆ

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಪೂ ಶಾಲಾ ಇಲಾಖೆ ಉಪನಿರ್ದೇಶಕ ಎಂ.ಮರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲರು ಹೆಚ್.ಆರ್.ನರಸಿಂಹಮೂರ್ತಿ ಜಿ.ಪ್ರಾ.ಸಂ.ಅಧ್ಯಕ್ಷ ಕೆ.ಸತ್ಯೇಂದ್ರ, ಜಿ.ಪ್ರಾ.ಸಂ. ಆರ್.ಮುನಿರಾಜು, ಜಿ.ಉ.ಸಂ.ಅಧ್ಯಕ್ಷ-ಡಾ.ಮುನಿರೆಡ್ಡಿ, ಬಸವರಾಜು.ಹೆಚ್.ಚಿಕ್ಕಣಜೀ,ಮಂಜುನಾಥ್ ಮತ್ತು ಕಾಲೇಜಿನ ಸಿಬ್ಬಂಧಿವರ್ಗ ಕಾರ್ಯಕ್ರಮ ನಿರ್ವಹಿಸಿದರು.

Share this article