ಹಿರಿಯರ ಆಸರೆಗೆ ಮಕ್ಕಳು ಮುಂದಾಗಬೇಕು

KannadaprabhaNewsNetwork |  
Published : Oct 02, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಬದುಕಿನುದ್ದಕ್ಕೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಿದ ಪೋಷಕರಿಗೆ ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಮಕ್ಕಳು ವಿದೇಶ, ದೂರದ ಊರುಗಳಲ್ಲಿ ನೆಲೆಸಿ ಹಿರಿಯರನ್ನು ಏಕಾಂಗಿಯಾಗಿಸುತ್ತಿರುವುದು ವಿಷಾದನೀಯ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

: ಎ.ಎನ್. ಮಹೇಶ್‌ ಸಲಹೆ । ಹಿರಿಯ ನಾಗರಿಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬದುಕಿನುದ್ದಕ್ಕೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಿದ ಪೋಷಕರಿಗೆ ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಮಕ್ಕಳು ವಿದೇಶ, ದೂರದ ಊರುಗಳಲ್ಲಿ ನೆಲೆಸಿ ಹಿರಿಯರನ್ನು ಏಕಾಂಗಿಯಾಗಿಸುತ್ತಿರುವುದು ವಿಷಾದನೀಯ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸುಮಾರು 40-50 ವರ್ಷಗಳ ಹಿಂದೆ ಇದ್ದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ 30-40 ಮಂದಿ ಒಂದೇ ಮನೆಯಲ್ಲಿ ಪ್ರೀತಿ, ಸೌಹಾರ್ದದಿಂದ ಬದುಕುತ್ತಿದ್ದರು. ಜೀವನ ಸರಳವಾಗಿದ್ದರೂ ಪರಸ್ಪರ ಹಂಚಿಕೊಂಡು ಬದುಕುವ ಮನೋಭಾವವಿತ್ತು. ಆಧುನಿಕ ಜೀವನಶೈಲಿಯಲ್ಲಿ ಕುಟುಂಬದ ಮೌಲ್ಯಗಳು ಹಾಗೂ ಮಾನವೀಯ ಸಂಬಂಧ ಕ್ಷೀಣಿಸುತ್ತಿರುವುದು ಆತಂಕಕಾರಿ ಎಂದರು.ಮಕ್ಕಳ ಅಸಹಕಾರದಿಂದ ಹೈಟೆಕ್ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಹಿರಿಯರ ಬಗ್ಗೆ ಗೌರವ ಹಾಗೂ ಕುಟುಂಬದ ಮೌಲ್ಯಗಳು ಮರುಕಳಿಸಬೇಕಿದೆ. ಪೋಷಕರು ಮಕ್ಕಳನ್ನು ಅತಿಯಾದ ಮುದ್ದು ಹಾಗೂ ಐಷಾರಾಮಿ ವಾತಾವರಣದಲ್ಲಿ ಬೆಳೆಸುವ ಬದಲು ಜೀವನದ ಕಷ್ಟ-ಸುಖ, ಶ್ರಮದ ಬೆಲೆ ತಿಳಿಸಿಕೊಡಬೇಕು ಎಂದು ಹೇಳಿದರು.ಹಿರಿಯರಿಗೆ ಮಕ್ಕಳು ಹಾಗೂ ಮೊಮ್ಮಕ್ಕಳ ಪ್ರೀತಿ ಸಾನ್ನಿಧ್ಯವೇ ದೊಡ್ಡ ಆಸ್ತಿ. ಮೊಮ್ಮಕ್ಕಳು ತೊಡೆ ಮೇಲೆ ಕುಳಿತು ನೀಡುವ ಒಂದು ಮುತ್ತಿನ ಸಂತೋಷವನ್ನು ಹಣವಾಗಲಿ, ಕೊರಿಯರ್ ಮೂಲಕ ಕಳುಹಿಸುವ ಉಡುಗೊರೆಗಳಾಗಲಿ ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಹಿರಿಯರನ್ನು ಹೇಗೆ ನೋಡಿಕೊಳ್ಳುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಹಿರಿಯರೂ ಬದಲಾದ ಕಾಲಕ್ಕೆ ತಕ್ಕಂತೆ ಕುಟುಂಬದವರೊಂದಿಗೆ ಹೊಂದಾಣಿಕೆಯಿಂದ ಸಾಗಬೇಕು. ಸೊಸೆಯನ್ನು ಮಗಳಂತೆ ಕಂಡರೆ ಆಕೆಯೂ ಅತ್ತೆ-ಮಾವಂದಿರನ್ನು ತಂದೆ-ತಾಯಿಯಂತೆ ಗೌರವಿಸುತ್ತಾಳೆ. ಪರಸ್ಪರ ಪ್ರೀತಿ ಮತ್ತು ಹೊಂದಾಣಿಕೆಯೇ ಕುಟುಂಬದಲ್ಲಿ ಶಾಂತಿ ನೆಲೆಸಲು ಕಾರಣ ಎಂದು ಹೇಳಿದರು.ಹಿರಿಯರಿಗಾಗಿ ವಿಶೇಷ ಆರೋಗ್ಯ ಶಿಬಿರ:

ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ದೇಶದ ಒಟ್ಟು ಶೇ.7ರಿಂದ 8ರಷ್ಟು ಹಿರಿಯ ನಾಗರಿಕರಿದ್ದು, ಅವರ ಅನುಭವ ಹಾಗೂ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅಮೂಲ್ಯ ಎಂದರು.60 ವರ್ಷ ದಾಟಿದ ಬಳಿಕ ಹಿರಿಯರು ಎದುರಿಸುವ ಸಾಮಾಜಿಕ, ಆರೋಗ್ಯ ಹಾಗೂ ಮಾನಸಿಕ ಸವಾಲು ಗುರುತಿಸಿ ಪರಿಹರಿಸುವ ಅಗತ್ಯವಿದೆ. ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಸಂವೇದನಾಶೀಲ ಹಾಗೂ ಅರ್ಹ ಕೌನ್ಸಿಲರ್‌ಗಳನ್ನು ನೇಮಿಸುವ ಅಗತ್ಯವಿದೆ. ಸಿಬ್ಬಂದಿ ಆಯ್ಕೆ ಮತ್ತು ಕೇಂದ್ರಗಳ ಕಾರ್ಯವೈಖರಿ ಮೌಲ್ಯಮಾಪನಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.ಮಕ್ಕಳು ಹಿರಿಯರನ್ನು ನೋಡಿಕೊಳ್ಳದಿದ್ದರೆ ಅಥವಾ ಆಸ್ತಿ ಸಂಬಂಧಿತ ಸಮಸ್ಯೆಗಳಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಅಲ್ಲಿ ಸೂಕ್ತ ಪರಿಹಾರ ದೊರೆಯದಿದ್ದರೆ ಡಿಸಿ ಕಚೇರಿಗೆ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಹಿರಿಯ ನಾಗರಿಕರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ. ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ, ಕಷ್ಟಪಟ್ಟು ಸಾಕಿ ಬೆಳೆಸಿದ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಸಂಸ್ಕೃತಿ ನಿಲ್ಲಬೇಕು. ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದು ಪ್ರತಿ ಮಗ-ಮಗಳ ಕರ್ತವ್ಯ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಾನಂದಸ್ವಾಮಿ, ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್. ನಂಜುಂಡರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ವೀರಭದ್ರಯ್ಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ