
ಕಡೂರು ಭೇಟಿ ಸವಿನೆನಪಿಗೆ ನಿರ್ಮಾಣವಾದ ದೇಗುಲ
ಭಾರತದ ಸ್ವಾತಂತ್ರ್ಯ ಹೋರಾಟ, ಅಹಿಂಸಾ ತತ್ವ ಹಾಗೂ ಮಹಾತ್ಮ ಗಾಂಧೀಜಿ ಎಂದಾಕ್ಷಣ ನಿಡಘಟ್ಟ ಗ್ರಾಮಸ್ಥರ ವಿಶಿಷ್ಟ ಗೌರವದ ಪರಂಪರೆ ನೆನಪಾಗುತ್ತದೆ. ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ೧೯೪೮ರಲ್ಲಿ ನಿರ್ಮಿಸಲಾಗಿರುವ ಪುಟ್ಟ ಗಾಂಧಿ ದೇವಾಲಯದಲ್ಲಿ ಕಳೆದ ೭೮ ವರ್ಷಗಳಿಂದ ಗ್ರಾಮಸ್ಥರು ನಿತ್ಯ ಪೂಜೆ, ಮಂಗಳಾರತಿ ಹಾಗೂ ನೈವೇದ್ಯ ಸಲ್ಲಿಸುವ ಮೂಲಕ ರಾಷ್ಟ್ರಪಿತನನ್ನು ಸ್ಮರಿಸುತ್ತಿದ್ದಾರೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಕಡೂರು ಭಾಗಕ್ಕೆ ಭೇಟಿ ನೀಡಿದ್ದ ಸವಿನೆನಪಿಗಾಗಿ ಗ್ರಾಮಸ್ಥರು ಈ ಸ್ಮಾರಕ ನಿರ್ಮಿಸಿದ್ದಾರೆ. ೧೯೨೭ರ ಆ.೧೮ರಂದು ಅಂದಿನ ಕಡೂರು ಜಿಲ್ಲೆಗೆ ಭೇಟಿ ನೀಡಿದ್ದ ಗಾಂಧೀಜಿ ನಿಡಘಟ್ಟ ಗೇಟ್ ಬಳಿ ಭಾಷಣ ಮಾಡಿದ್ದರು. ಅವರ ಭಾಷಣ ಕೇಳಿದ್ದ ಹಿರಿಯರಲ್ಲಿ ಸ್ವರಾಜ್ಯ ಕುರಿತ ಅವರ ಮಾತುಗಳು ರೋಮಾಂಚನ ಮೂಡಿಸಿದ್ದವು ಎಂದು ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಗಾಂಧೀಜಿ ನಿಧನದ ಬಳಿಕ ೧೯೪೮ರ ಫೆ.೨೨ರಂದು ಗ್ರಾಮಸ್ಥರು ಒಗ್ಗೂಡಿ ಕೇವಲ ಒಂದು ರಾತ್ರಿಯಲ್ಲಿ ಪುಟ್ಟ ಗುಡಿ ನಿರ್ಮಿಸಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೈಸೂರು ಸರ್ಕಾರದ ಸಚಿವರಾಗಿದ್ದ ಕೆ.ಟಿ.ಭಾಷ್ಯಂ ಅಯ್ಯಂಗಾರ್ ದೇವಾಲಯವನ್ನು ಉದ್ಘಾಟಿಸಿದ್ದರು.ಅಂದಿನಿಂದ ಗ್ರಾಮಸ್ಥರ ಸಹಕಾರದಿಂದ ಇಲ್ಲಿ ನಿರಂತರ ಪೂಜಾ ಕೈಂಕರ್ಯ ನಡೆಯುತ್ತಿದೆ. ಗ್ರಾಮದ ವಿದ್ಯಾರ್ಥಿಗಳು ಕ್ರೀಡಾಕೂಟ ಅಥವಾ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದಾಗ ಅದನ್ನು ಮೊದಲು ಗಾಂಧೀಜಿ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿ ಬಳಿಕ ಶಾಲೆಗೆ ಕೊಂಡೊಯ್ಯುವ ಸಂಪ್ರದಾಯ ಇದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ವಿಶೇಷ ಪೂಜೆ, ಅಲಂಕಾರ ನೆರವೇರಿಸಿ ಮಹಾತ್ಮನಿಗೆ ಗೌರವ ಸಲ್ಲಿಸುತ್ತಾರೆ.ಕಡೂರು ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಳ್ಳೆಕೆರೆ ಮಾರ್ಗವಾಗಿ ನಿಡಘಟ್ಟ ಗ್ರಾಮಕ್ಕೆ ತೆರಳಿದರೆ ಇತಿಹಾಸ ಪ್ರಸಿದ್ಧ ಆಂಜನೇಯ ದೇವಾಲಯದ ಎದುರು ಈ ಪುಟ್ಟ ಗಾಂಧಿ ದೇವಾಲಯ ಕಾಣಸಿಗುತ್ತದೆ. ರಾಜ್ಯದಲ್ಲೇ ವಿಶೇಷ ಸ್ಥಾನ ಪಡೆಯಬಹುದಾದ ಈ ಸ್ಮಾರಕ ಎಲೆಮರೆ ಕಾಯಿಯಂತಿದೆ.ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಈ ಐತಿಹಾಸಿಕ ಸ್ಥಳದ ಮಹತ್ವ ಗುರುತಿಸಿ ಅಭಿವೃದ್ಧಿಪಡಿಸಬೇಕು. ಗಾಂಧೀಜಿ ಅವರ ಆದರ್ಶಗಳು ಹಾಗೂ ಅಹಿಂಸಾ ಸಂದೇಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸ್ಥಳ ಪ್ರವಾಸಿ ಹಾಗೂ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.-- ಬಾಕ್ಸ್ --ನ್ಯಾಯದ ಕಟ್ಟೆಯಲ್ಲೂ ಗಾಂಧೀಜಿ ನೆನಪುಗಾಂಧಿ ದೇವಾಲಯದ ಸಮೀಪದಲ್ಲೇ ‘ನ್ಯಾಯದ ಕಟ್ಟೆ’ ಎಂಬ ಸ್ಥಳವಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಣ್ಣಪುಟ್ಟ ಗಲಾಟೆ, ತಕರಾರುಗಳನ್ನು ಇಲ್ಲಿ ಗಾಂಧೀಜಿ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯದ ಹಾದಿಯಲ್ಲಿ ಬಗೆಹರಿಸಿ ಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಇಲ್ಲಿರುವ ಶ್ರೀ ಆಂಜನೇಯ ಸ್ವಾಮಿಗೂ ಇದೇ ರೀತಿಯಲ್ಲಿ ಪೂಜೆ ಹಾಗೂ ಪ್ರಮಾಣ ಮಾಡುವ ಪದ್ಧತಿ ಇಂದಿಗೂ ಮುಂದುವರಿದಿದೆ.