ಗೋಕರ್ಣ: ಅಕ್ಕಪಕ್ಕ ಕುಳಿತು ದರ ಕೂಗುತ್ತಾ ಜನರನ್ನು ಕರೆಯುತ್ತಿದ್ದ ಸಂತೆ ವ್ಯಾಪಾರಿಗಳು ಈ ವಾರ ಮಂಕಾಗಿದ್ದಾರೆ. ಪಕ್ಕದಲ್ಲಿ ಕುಳಿತುಕೊಳ್ಳುವವರು ಈ ಲೋಕದಿಂದ ತೆರಳಿದ್ದಾರೆ. ವ್ಯಾಪಾರಕ್ಕೆ ಉತ್ಸಾಹವಿಲ್ಲ. ಆದರೆ ಜೀವನಕ್ಕೆ ಇದೇ ಆಧಾರ ಆಗಿರುವುದರಿಂದ ಒಲ್ಲದ ಮನಸ್ಸಿನಿಂದ ಗುರುವಾರ ವಾರದ ಸಂತೆಯಲ್ಲಿ ವ್ಯಾಪಾರ ನಡೆಸಿದರು.
ಸವಣೂರು ವ್ಯಾಪಾರಸ್ಥರು ಇಲ್ಲಿ ನಿಂಬೆಹಣ್ಣು, ಈರುಳ್ಳಿ, ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದ ಜಾಗ ಈ ವಾರ ಖಾಲಿಯಿದೆ. ಪಕ್ಕದಲ್ಲಿ ಕುಳಿತುಕೊಂಡ ವ್ಯಾಪಾರಿ ಮಾಡುವವನ ಮುಖವೂ ಕಳಾಹೀನವಾಗಿತ್ತು. ಗ್ರಾಹಕರೊಂದಿಗೆ ಮಾತನಾಡುತ್ತ ಆಗಾಗ ಒಮ್ಮೆ ಅತ್ತ ನೋಡುತ್ತಿದ್ದರು. ಪ್ರತಿ ವಾರ ನಮ್ಮ ಜತೆ ಇರುತ್ತಿದ್ದವ, ಈ ವಾರ ಇಲ್ಲವಲ್ಲರಿ? ಅವನದೆ ನೆನಪು ಆಗುತ್ತದೆ ಎನ್ನುತ್ತಾ, ಮುಖ ನೋಡುತ್ತಾ ಏನು ಬೇಕು ತೆಗೆದುಕೊಳ್ಳಿ ಎಂದು ಸಮಾಧಾನ ಮಾಡಿಕೊಂಡರು.
ಸವಣೂರು ವ್ಯಾಪಾರಸ್ಥರಿಂದ ಕಾಯಂ ಆಗಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಜನರು ಸಹ ಅವರ ಕುಳಿತುಕೊಳ್ಳುವ ಜಾಗ ನೋಡಿ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ಅನೇಕರು ಅವರ ಭಾವಚಿತ್ರ ನೋಡಿ ಕಣ್ಣೀರಿಟ್ಟರು. ಒಟ್ಟಾರೆ ಕರಾಳ ಘಟನೆಯ ಕಹಿ ನೆನಪಿನಲ್ಲಿಯೇ ಬಂದವರು ವಹಿವಾಟು ನಡೆಸಿದರು. ಈ ನಡುವೆ ಪ್ರತಿ ವಾರ ಬರುತ್ತಿದ್ದ ಇತರ ಕೆಲವು ವ್ಯಾಪಾರಸ್ಥರು ಗೈರಿರುವುದು ಕಂಡುಬಂತು.ಬಸ್ ಸಂಚಾರ ಇದ್ದರೆ ಬದುಕುಳಿಯುತ್ತಿದ್ದರು:
ಇನ್ನೂ ಶಿರಸಿ- ಕುಮಟಾ ಮಾರ್ಗದಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಈ ವ್ಯಾಪಾರಿಗಳು ಯಾವಾಗಲೂ ಬಸ್‌ನಲ್ಲಿ ಬರುತ್ತಿದ್ದರು ಎಂದು ವ್ಯಾಪಾರಿ ಜಾಫರ್ ಹೇಳಿದರು. ಪ್ರತಿ ಬಾರಿ ಲಾರಿಯಲ್ಲಿ ತರಕಾರಿ ತುಂಬಿದ ಬಳಿಕ ವ್ಯಾಪಾರಸ್ಥರು ಬಸ್‌ನಲ್ಲಿ ತೆರಳುತ್ತಿದ್ದರು. ಬೆಳಗ್ಗೆ ಒಳಗೆ ಆಯಾ ಸ್ಥಳಕ್ಕೆ ತಲುಪುತ್ತಿದ್ದರು. ಆನಂತರ ಲಾರಿಯಲ್ಲಿ ಬಂದ ತರಕಾರಿಯನ್ನು ಇಳಿಸಿಕೊಂಡು ವಹಿವಾಟು ನಡೆಸುತ್ತಿದ್ದರು. ಆದರೆ ಶಿರಸಿ- ಕುಮಟಾ ಮಾರ್ಗದಲ್ಲಿ ಬಸ್ ಸಂಚಾರ ಬಂದಾಗಿದ್ದರಿಂದ ಸುತ್ತಿ ಬಳಸಿ ಬಸ್ ಹಿಡಿದು ತಲುಪುವುದು ಕಷ್ಟವಾದ್ದರಿಂದ ಅನಿವಾರ್ಯವಾಗಿ ಲಾರಿಯಲ್ಲಿ ಪ್ರಯಾಣ ಬೆಳೆಸಿದ್ದರು ಎಂದಿದ್ದಾರೆ.ತರಕಾರಿ ಮಾರಾಟಗಾರರಿಗೆ ಆಘಾತ
ಕಾರವಾರ: ಕುಮಟಾ ಸಂತೆಗೆಂದು ಹೊರಟ ಹಾವೇರಿಯ ತರಕಾರಿ ಮಾರಾಟಗಾರರು ಬಾರದ ಲೋಕಕ್ಕೆ ಹೋಗಿರುವುದರಿಂದ ಇಡೀ ಜಿಲ್ಲೆ ತಲ್ಲಣಗೊಂಡಿದ್ದು, ಅದರಲ್ಲೂ ಪ್ರತಿ ಸಂತೆಗೆ ಹೋಗಿ ತರಕಾರಿ ಮಾರಾಟ ಮಾಡುತ್ತಿದ್ದವರು ತೀವ್ರ ಆಘಾತಗೊಂಡಿದ್ದಾರೆ.ಯಲ್ಲಾಪುರದ ಗುಳ್ಳಾಪುರ ಬಳಿ ಬುಧವಾರ ನಸುಕಿನಲ್ಲಿ ಹಾವೇರಿಯಿಂದ ಕುಮಟಾ ಸಂತೆಗೆ ಹೋಗುತ್ತಿದ್ದ 10 ಜನರು ಲಾರಿ ಉರುಳಿದ ದುರಂತದಲ್ಲಿ ಮೃತಪಟ್ಟಿದ್ದರು. 19 ಜನರು ಗಾಯಗೊಂಡಿದ್ದಾರೆ. ಈ ತರಕಾರಿ ಮಾರಾಟಗಾರರ ಸಾವಿನ ಅಲೆ ಜಿಲ್ಲೆಯ ಇತರೆಡೆಗಳಲ್ಲಿ ನಡೆಯುವ ಸಂತೆಯಲ್ಲೂ ಅಪ್ಪಳಿಸಿದೆ.ಬುಧವಾರ ಇವರಿಗಿಂತ ಮುಂಚೆ ಕುಮಟಾಕ್ಕೆ ಹೋಗಿದ್ದ ತರಕಾರಿ ಮಾರಾಟಗಾರರು ಈ ಅಪಘಾತದ ಸುದ್ದಿ ಕೇಳಿ ಆಘಾತಗೊಂಡು ಮಾರಾಟವನ್ನು ಸ್ಥಗಿತಗೊಳಿಸಿ ಅಪಘಾತ ಸ್ಥಳ, ಯಲ್ಲಾಪುರ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್‌ಗೆ ದೌಡಾಯಿಸಿದರು. ತಮ್ಮವರನ್ನು ಕಳೆದುಕೊಂಡವರ ದುಃಖ ಕುಮಟಾ ಸಂತೆಯಲ್ಲಿ ಕಂಡುಬಂತು.
ಏನಿಲ್ಲವೆಂದರೂ ಹಾವೇರಿ ಜಿಲ್ಲೆಯ ವಿವಿಧೆಡೆಯಿಂದ ಹತ್ತಾರು ವಾಹನಗಳಲ್ಲಿ ತರಕಾರಿ ಹೇರಿಕೊಂಡು ಮಾರಾಟಕ್ಕೆ ಬರುತ್ತಾರೆ. ಈ ಅಪಘಾತದ ಪರಿಣಾಮ ಜಿಲ್ಲೆಯ ಪ್ರತಿ ಸಂತೆಯ ಮೇಲೂ ಉಂಟಾಗಿದೆ.