ಬಳ್ಳಾರಿ: ಇಂಗ್ಲೀಷ್ ಮೋಹದಿಂದ ಪೋಷಕರು ಹೊರ ಬರಬೇಕು. ಕೇವಲ ಇಂಗ್ಲೀಷ್ ಓದಿದರೆ ಕೆಲಸ ಸಿಗುವುದಿಲ್ಲ. ಚೀನಾ, ಜಪಾನ್ ನಂತಹ ದೇಶಗಳು ಅಭಿವೃದ್ಧಿ ಹೊಂದಿರುವುದು ತಮ್ಮ-ತಮ್ಮ ಮಾತೃ ಭಾಷೆಯಲ್ಲಿಯೇ ಹೊರತು ಇಂಗ್ಲೀಷ್‌ನಿಂದಲ್ಲ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.
ಪ್ರತಿಯೊಂದು ಹೆಜ್ಜೆಯಲ್ಲಿ ಕನ್ನಡದ ಅಸ್ತಿತ್ವ ಪ್ರತಿಫಲಿಸಬೇಕಾದರೆ ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಕನ್ನಡ ಮಾತನಾಡುವ ಮೂಲಕ ಹೆಚ್ಚ ಬಳಕೆಯಲ್ಲಿಡುವುದರಿಂದ ಸಹ ಭಾಷಾ ಉಳಿವು ಸಾಧ್ಯವಿದೆ. ಇಂಗ್ಲೀಷ್ ಮಾಧ್ಯಮದಲ್ಲಿ ಮಕ್ಕಳು ಓದುತ್ತಿದ್ದರೂ ಅವರ ಜೊತೆ ಇಂಗ್ಲೀಷ್‌ನಲ್ಲಿ ವ್ಯವಹರಿಸದೆ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳಿದರು. ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ವಿಶ್ವಗುರು ಬಸವಣ್ಣ ಸೇರಿದಂತೆ ಅನೇಕ ವಚನಕಾರರು, ಸಂತರು ತಮ್ಮ ವಚನಗಳನ್ನು ಕನ್ನಡದಲ್ಲಿಯೇ ರಚಿಸಿದ್ದಾರೆ. ಪರ ರಾಜ್ಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯು ಯಾವುದೇ ಜಾತಿ, ಧರ್ಮ, ಭೇದ-ಭಾವವಿಲ್ಲದೇ ಯಾರಿಗೂ ಅಡಚಣೆಯಾಗದೇ ಸುಲಲಿತವಾಗಿ ಬಾಳ್ವೆ ನಡೆಸಲು ಅನುವು ಮಾಡಿದೆ ಎಂದರು.
ತೆರಿಗೆ ಪಾವತಿಯಲ್ಲಿ 2ನೇ ಸ್ಥಾನ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದರಂತೆ ನಮ್ಮ ರಾಜ್ಯವು ತೆರಿಗೆ ಪಾವತಿಯಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಪ್ರತಿವರ್ಷ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ನಮ್ಮ ರಾಜ್ಯದಿಂದಲೇ ಸಂದಾಯವಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೇ ಇರುವ ಮನೆಗಳಲ್ಲಿ ವಾಸಿಸುತ್ತಿರುವ ಜನ ಸಾಮಾನ್ಯರ ಸ್ಥಿತಿ ಮನಗಂಡು ಸಿದ್ದರಾಮಯ್ಯ ಅವರು ಎ-ಖಾತಾ, ಬಿ-ಖಾತಾ ವಿತರಣೆ ಕಾರ್ಯಕ್ರಮ ರೂಪಿಸಿದ್ದರು. ಈಗಾಗಲೇ ರಾಜ್ಯದಲ್ಲಿ ಶೇ.70 ರಷ್ಟು ಖಾತಾ ವಿತರಿಸಲಾಗಿದೆ ಸಚಿವ ರಹೀಂ ಖಾನ್ ತಿಳಿಸಿದರು.
70ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಚಾಲನೆ ನೀಡಿದರು.
ಬರ‍್ರಕಥಾ- ಜಂಬಕ್ಕ ಎಂಡಿ ಕ್ಯಾಂಪ್(ಕಂಪ್ಲಿ), ಬಯಲಾಟ- ಚೆನ್ನದಾಸರ ಮಾರೆಪ್ಪ(ಮೆಟ್ರಿ), ಹಗಲುವೇಷ- ಕೆ.ಶಂಕ್ರಪ್ಪ(ಶ್ರೀಧರಗಡ್ಡೆ), ಕನ್ನಡ ಸೇವೆ- ಹೀಮಂತ್ ರಾಜ್ ಸಂಗನಕಲ್ಲು, ಶಿಕ್ಷಣ ಕ್ಷೇತ್ರ- ಸಿ.ಎಂ.ಶಿಗ್ಗಾವಿ ಸಂಡೂರು ಮತ್ತು ಪುರುಷೋತ್ತಮ ಬಿ.ಬಳ್ಳಾರಿ, ವೈದ್ಯಕೀಯ ಕ್ಷೇತ್ರ- ಡಾ.ಮಧುಸೂಧನ್ ಕಾರಿಗನೂರು (ಸಿರುಗುಪ್ಪ), ಸಾಹಿತ್ಯ ಕ್ಷೇತ್ರ- ಬಂಗಿ ದೊಡ್ಡ ಮಂಜುನಾಥ (ಕಂಪ್ಲಿ), ಚಿತ್ರಕಲೆ ಕ್ಷೇತ್ರ- ಮಹ್ಮದ್ ರಫಿ ಬಳ್ಳಾರಿ, ಸಾಹಿತ್ಯ/ಸಂಘಟನೆ ಕ್ಷೇತ್ರ- ದಮ್ಮೂರು ಮಲ್ಲಿಕಾರ್ಜುನ(ಸಿರುಗುಪ್ಪ) ಪತ್ರಿಕೋದ್ಯಮ- ಕೆ.ಎನ್.ಗಂಗಾಧರ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕನ್ನಡ ಪ್ರೇಮಿಗಳ ನೇತೃತ್ವದಲ್ಲಿ ಹಂಪಿಯ ತಾಯಿ ಭುವನೇಶ್ವರಿ ದೇವಸ್ಥಾನದಿಂದ ಪ್ರತಿವರ್ಷದಂತೆ ಈ ವರ್ಷವೂ ತಂದ ಕನ್ನಡ ಜ್ಯೋತಿಯನ್ನು ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.