ಕನ್ನಡಪ್ರಭ ವಾರ್ತೆ ಮಂಗಳೂರು
ಇದು ಟೀಮ್ ಮಂಗಳೂರು ತಂಡದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ. ಇಂಗ್ಲೆಂಡ್, ಜರ್ಮನಿ, ನೆದರ್ ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಇಷ್ಟೊನಿಯ, ಸ್ವೀಡನ್, ಇಂಡೋನೇಷಿಯಾ, ಪೊರ್ಚುಗಲ್ ಮುಂತಾದ ವಿದೇಶಿ ಗಾಳಿಪಟ ತಂಡಗಳು ಮತ್ತು ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಿಂದ ಗಾಳಿಪಟ ತಂಡಗಳು ಆಗಮಿಸುತ್ತಿವೆ. ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳು ಹಾರಲಿವೆ. ಚೈನೀಸ್ ಡ್ರ್ಯಾಗನ್ ಗಾಳಿಪಟವನ್ನು ಇಂಡೋನೇಷಿಯಾ ತನ್ನ ಸಂಸ್ಕೃತಿಯ ಪ್ರತೀಕವಾಗಿ ಹಾರಿಸಲಿದೆ. ಮ್ಯೂಸಿಕ್‌ಗೆ ತಕ್ಕಂತೆ ನರ್ತಿಸುವ ಸ್ಟಂಟ್ ಗಾಳಿಪಟವನ್ನು ಗ್ರೀಸ್‌ನ ಮಂದಿ ಹಾರಿಸಲಿದ್ದಾರೆ. ಕಥಕ್ಕಳಿಯ ನೂರು ಗಾಳಿಪಟವೂ ಗಗನದಲ್ಲಿ ಮಿಂಚಲಿದೆ ಎಂದರು.
ಟೀಮ್ ಮಂಗಳೂರು ತಂಡ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಗ್‌ಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿವೆ ಎಂದರು.‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ದೇಶ, ವಿದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶವಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಮನರಂಜನೆಗೆ ಸೂತ್ರವಾಗಿರಲಿದೆ ಎಂದರು.
ಟೀಂ ಮಂಗಳೂರು ತಂಡದ ಸರ್ವೇಶ್ ರಾವ್, ಪ್ರಶಾಂತ್ ಉಪಾಧ್ಯಾಯ, ಪ್ರಾಣ್ ಹೆಗಡೆ, ಗಿರಿಧರ ಕಾಮತ್ ಗ್ರೀಸ್‌ನ ಕೋಸ್ಟಾ ಮತ್ತಿತರರಿದ್ದರು.
ಈ ಬಾರಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಪೋಸ್ಟರ್‌ನಲ್ಲಿ ಕರಾವಳಿಯ ಜಂಭದ ಕೋಳಿ ಆಹ್ವಾನ ನೀಡುವುದನ್ನು ಚಿತ್ರಿಸಲಾಗಿದೆ.
ಪ್ರತಿ ವರ್ಷ ಮಂಗಳೂರು ಗಾಳಿಪಟ ಉತ್ಸವಕ್ಕೆ ಕಾಯುತ್ತಿರುತ್ತೇನೆ. ಈ ಬಾರಿ ಕೇರಳದ ಕಥಕ್ಕಳಿಯ ನೂರು ಚಿತ್ರವನ್ನು ಒಂದೇ ದಾರದಲ್ಲಿ ಪೋಣಿಸಿ ಹಾರಾಟ ನಡೆಸಲಾಗುತ್ತಿರುವುದು ವಿಶೇಷ. ಕ್ರಿಕೆಟ್‌ಗೆ ಕೋಲ್ಕತ್ತಾ ಸ್ಟೇಡಿಯಂ ಹೊಂದಿಕೆಯಾಗುವಂತೆ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ಬೀಚ್ ಪ್ರಸಿದ್ಧಿಯಾಗಿದೆ.
-ಕೋಸ್ಟಾ, ಗಾಳಿಪಟ ಹಾರಾಟಗಾರ, ಗ್ರೀಸ್.