ಭದ್ರತೆ ನಿರ್ವಹಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ ಆರೋಪದ ಮೇರೆಗೆ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭದ್ರತೆ ನಿರ್ವಹಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ ಆರೋಪದ ಮೇರೆಗೆ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಐವಿಎಸ್ ಡಿಜಿಟಲ್ ಸಲ್ಯೂಷನ್ ಸಂಸ್ಥೆಯ ಸಿಬ್ಬಂದಿಯಾದ ಚಿತ್ರದುರ್ಗ ಮೂಲದ ಮಂಜುನಾಥ್ ಮತ್ತು ಉತ್ತರಪ್ರದೇಶ ಮೂಲದ ಅಬ್ದುಲ್ ಕಲಾಂ ಬಂಧಿತರು. ಆರೋಪಿಗಳು ಏ.24ರಂದು ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ವೇಳೆ ಸುಮಾರು 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವಿತ್ತು. ಆ ದಿನ ಕ್ರೀಡಾಂಗಣದಲ್ಲಿ ಭದ್ರತೆಯ ಮೇಲ್ವಿಚಾರಣೆಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ಸಂಪರ್ಕ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ಏಕಾಏಕಿ ಕಡಿತವಾಗಿತ್ತು. ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಸಿಸಿ ಕ್ಯಾಮೆರಾಗಳಲ್ಲಿ ಲೋಪವಾಗಿರುವುದು ಪೊಲೀಸರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ನಂತರ ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು.
ವೇತನ ಬಾಕಿ ಉಳಿಸಿಕೊಂಡಿದಕ್ಕೆ ಕೃತ್ಯ:
ಆರೋಪಿಗಳು ತಮಗೆ ನೀಡಿದ್ದ ಪಾಸ್‌ಗಳನ್ನು ಬಳಸಿಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿ ನೆಟ್‌ವರ್ಕ್ ವಿಡಿಯೋ ರೆಕಾರ್ಡರ್ (ಎನ್‌ವಿಆರ್) ಮತ್ತು ಫೈಬರ್ ಸಂಪರ್ಕಗಳನ್ನು ಕಡಿತ ಮಾಡಿದ್ದಾರೆ. ಅದರಿಂದ ಪ್ರವೇಶ ದ್ವಾರಗಳ ಕ್ಯಾಮೆರಾಗಳು, ಕ್ರೀಡಾಂಗಣದ ಸುತ್ತ-ಮುತ್ತಲಿನ ಕ್ಯಾಮೆರಾಗಳು, ಡಿ ಕಾರ್ಪೊರೇಟ್ ಸ್ಟ್ಯಾಂಡ್ ಹಾಗೂ ಇತರೆ ಭಾಗಗಳ ದೃಶ್ಯಾವಳಿಗಳ ಫೀಡ್ ಸ್ಥಗಿತವಾಗಿತ್ತು. ಅದನ್ನು ನಿಗಾ ವಹಿಸುತ್ತಿದ್ದ ಪೊಲೀಸರ ತಂಡ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದೆ. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಂಪನಿ ತಮಗೆ ನೀಡಬೇಕಿದ್ದ ವೇತನ ಬಾಕಿ ಉಳಿಸಿಕೊಂಡಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ಸಂಸ್ಥೆಯ ಮೇಲಿನ ಸಿಟ್ಟಿಗೆ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿ ಪೊಲೀಸರ ತಲೆ ಬಿಸಿ ಮಾಡಿದ್ದಾರೆ.
ಸಿಸಿ ಕ್ಯಾಮೆರಾಗಳ ನಿರ್ವಹಣೆಯಯನ್ನು ಸ್ಟ್ಯಾಕ್ ಎಂಬ ಕಂಪನಿಗೆ ನೀಡಲಾಗಿದೆ. ಈ ಕಂಪನಿಯು ಐವಿಎಸ್ ಡಿಜಿಟಲ್ ಸಲ್ಯೂಷನ್ ಎಂಬ ಸಂಸ್ಥೆಗೆ ಉಪಗುತ್ತಿಗೆ ನೀಡಿದೆ. ಆದರೆ, ಆ ಕಂಪನಿಯು ಆರೋಪಿಗಳಿಗೆ ಬಾಕಿ ವೇತನ ಉಳಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ.
ಇನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 1 ಗಂಟೆಯಲ್ಲೇ ಇಡೀ ಸಿಸಿ ಕ್ಯಾಮೆರಾ ವ್ಯವಸ್ಥೆಯನ್ನು ಸರಿಪಡಿಸಲಾಗಿತ್ತು. ಹೀಗಾಗಿ ಯಾವುದೇ ತೊಂದರೆ ಉಂಟಾಗಿಲ್ಲ. ಈ ಸಂಬಂಧ ಐವಿಎಸ್ ಡಿಜಿಟಲ್ ಸಲ್ಯೂಷನ್‌ನ ಗುತ್ತಿಗೆದಾರರಾದ ಆದಿತ್ಯ ಭಟ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಮಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.