ಹುಬ್ಬಳ್ಳಿ:
ಐಪಿಎಲ್ ಮಾದರಿಯಲ್ಲಿ ಪ್ರಥಮ ಬಾರಿಗೆ ವುಮೆನ್ಸ್ ಪ್ರೋ ಮಿನಿ ಫುಟ್‌ಬಾಲ್ ಲೀಗ್‌ನ್ನು ಅಕ್ಟೋಬರ್, ನವೆಂಬರ್‌ನಲ್ಲಿ ಆಯೋಜಿಸಲು ಚಿಂತಿಸಲಾಗಿದೆ ಎಂದು ಮಹಿಳಾ ಫುಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾ ಚೇರ್‌ಮನ್ ಮುಖೇಶ ಶರ್ಮಾ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಫುಟ್‌ಬಾಲ್ ಆಟಕ್ಕೆ ಹೆಚ್ಚಿನ ಉತ್ತೇಜನ ಹಾಗೂ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಮಹಿಳಾ ಫುಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ದಿಟ್ಟ ಹೆಜ್ಜೆಯಿಟ್ಟಿದ್ದು, ತರಬೇತಿ, ಆಯ್ಕೆ ಸೇರಿದಂತೆ ವಲಯವಾರು ತಂಡಗಳ ರಚನೆಗೆ ಮುಂದಾಗಿದೆ. ಮಹಿಳೆಯರಿಗಾಗಿ ಶಾಲೆ, ಕಾಲೇಜುಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸುವ ಮೂಲಕ ಪ್ರತಿಭಾನ್ವಿತ ಆಟಗಾರರನ್ನು ದೇಶಕ್ಕೆ ಪರಿಚಯಿಸುವ ಗುರಿಯನ್ನು ಫೆಡರೇಷನ್ ಹೊಂದಿದೆ ಎಂದರು.
ಐಪಿಎಲ್ ಮಾದರಿಯಲ್ಲಿ ಫ್ರಾಂಚೈಸಿಗಳ ಮೂಲಕ ಆಟಗಾರರನ್ನು ಹರಾಜು ಮೂಲಕ ಖರೀದಿ ಮಾಡಿ ತಂಡಗಳನ್ನು ರಚಿಸಿ ಪಂದ್ಯಾವಳಿ ನಡೆಸಲಾಗುವುದು. ಅದೇ ರೀತಿಯಲ್ಲಿ ಜೂನ್‌ನಲ್ಲಿ ವುಮೆನ್ಸ್ ಫುಟ್‌ಬಾಲ್ ಫೆಡರೇಶನ್ ಕಪ್ ದೇಶದ 8 ಪ್ರಮುಖ ಕ್ಲಬ್‌ಗಳನ್ನು ಒಳಗೊಂಡ ಪಂದ್ಯಾವಳಿಯನ್ನು ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ಆಯೋಜಿಸಲಾಗಿದೆ ಎಂದರು.ಈಗಾಗಲೇ ಫುಟ್‌ಬಾಲ್ ಕ್ರೀಡಾಪಟುಗಳಿಗೆ ಜುಲೈಯಿಂದ ಸೆಪ್ಟೆಂಬರ್ ವರೆಗೆ ತರಬೇತಿ ನೀಡಲಾಗುತ್ತಿದೆ. ಮುಂದೆ ಅಂತಾರಾಜ್ಯ ಪಂದ್ಯಾವಳಿ ಏರ್ಪಡಿಸಲಾಗುವುದು. ಪ್ರತಿ ಗ್ರಾಮ ಮಟ್ಟಕ್ಕೂ ಫುಟ್‌ಬಾಲ್ ಕ್ರೀಡೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಶನ್ ರಾಜ್ಯಾಧ್ಯಕ್ಷ ಜೇಮ್ಸ್ ಕುಮಾರ, ರಾಷ್ಟ್ರೀಯ ಪದಾಧಿಕಾರಿಗಳಾದ ನವೀನ ಹೆಗಡೆ, ಯತೀಶ ಬಂಗೇರಾ, ರಾಜ್ಯ ಪದಾಧಿಕಾರಿಗಳಾದ ಅಶೋಕ ಗಂಗೂರ, ವನಿತಾ ಗಡಳ್ಳಿ ಸೇರಿದಂತೆ ಹಲವರಿದ್ದರು.