ರೈತರು ತಮ್ಮ ಪೂರ್ವಜರ ಪಾಲದಿಂದಲೂ ಕೃಷಿ ಮಾಡಿಕೊಂಡು ಬಂದಿರುವಂತಹ ರೈತರ ರಸ್ತೆಗಳನ್ನು ಯಾರು ಬಂದ್ ಮಾಡಬಾರದು.
ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಕನ್ನಡಪ್ರಭ ವಾರ್ತೆ ಶಿರಸಿ
ರೈತರು ತಮ್ಮ ಪೂರ್ವಜರ ಪಾಲದಿಂದಲೂ ಕೃಷಿ ಮಾಡಿಕೊಂಡು ಬಂದಿರುವಂತಹ ರೈತರ ರಸ್ತೆಗಳನ್ನು ಯಾರು ಬಂದ್ ಮಾಡಬಾರದು. ಸ್ವಾತಂತ್ರ್ಯ ಸಿಕ್ಕು ಇಷ್ಟೊಂದು ವರ್ಷಗಳು ಗತಿಸಿದರೂ ಇಡೀ ಜಗತ್ತನ್ನು ಸಾಕಿ ಸಲುಹಿದ ರೈತರಿಗೆ ಕೃಷಿ ಮಾಡಲು ದಾರಿ ಇಲ್ಲ ಅಂದರೆನಾವು ಯಾವ ಕಾಲಘಟ್ಟದಲ್ಲಿ ಇದ್ದೇವೆ ಎಂದು ಯೋಚಿಸಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಕಳವಳ ವ್ಯಕ್ತಪಡಿಸಿದರು.ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಕೆಡಿಪಿ (ತ್ರೈಮಾಸಿಕ ಪ್ರಗತಿ ಪರಿಶೀಲನೆ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಾವುದೇ ಕಾರಣಕ್ಕೂ ಅರಣ್ಯ ಅಧಿಕಾರಿಗಳು ಅನಾದಿ ಕಾಲದಿಂದಲೂ ಕೃಷಿಯನ್ನು ಮಾಡಿಕೊಂಡು ಬಂದಂತಹ ರೈತರಿಗೆ ಅರಣ್ಯದಲ್ಲಿ ಕೃಷಿ ಮಾಡಲು ದಾರಿಯನ್ನು ಬಂದು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರ ಮತ್ತು ತಾಲೂಕಿನ ಅಭಿವೃದ್ಧಿ ಕಾಮಗಾರಿಗಳ ಹಾಗೂ ಜನಸಾಮಾನ್ಯರ ಮತ್ತು ರೈತರ ಕಷ್ಟಕಾರ್ಪಣ್ಯಗಳಿಗೆ ವಿಳಂಬ ಮಾಡದೆ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.ಬೇಸಿಗೆ ಕಾಲ ಸಮೀಪಿಸಿರುವ ಕಾರಣ ತಾಲೂಕಿನ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಬಾರದು ಮತ್ತು ನೀರಿನ ಸಮಸ್ಯೆ ಇರುವ ಪ್ರದೇಶ ಗುರುತಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.ಇತ್ತೀಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಬಗ್ಗೆ ಶಾಸಕರು ಮಾಹಿತಿ ಪಡೆದುಕೊಂಡು ಅದರ ಪ್ರಗತಿಯ ಕುರಿತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜನರು ಸರ್ಕಾರದ ಯೋಜನೆಗಳಿಗೆ ಭರವಸೆಯಿಂದ ಅರ್ಜಿ ನೀಡಿದ್ದಾರೆ. ಅಂತಹ ಅರ್ಜಿಗಳನ್ನು ಕೇವಲ ದಾಖಲೆಗಾಗಿ ಇಟ್ಟುಕೊಳ್ಳದೆ, ಅವುಗಳಿಗೆ ತಾರ್ಕಿಕ ಅಂತ್ಯ ಹಾಡಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಕಾಲದಲ್ಲಿ ತಲುಪಬೇಕು ಎಂದರು.ಕ್ಷೇತ್ರದ ಪ್ರಗತಿಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೆ, ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.ಈ ಸಂದರ್ಭ ನಗರ ಯೋಜನಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ತಹಸಿಲ್ದಾರ್ ಪಟ್ಟರಾಜ ಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿ.ಪಿ. ಸತೀಶ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ
ಜನರಿಂದಲೇ ಆಯ್ಕೆಯಾದ ಸರ್ಕಾರ ನಮ್ಮದು. ಅದಕ್ಕಾಗಿ ಜನರ, ರೈತರ, ಬಡವರ, ನಿರ್ಗತಿಕರ ದೀನ ದಲಿತರ ಕೆಲಸ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಸರ್ಕಾರ ಅಧಿಕಾರಿಗಳನ್ನ ನಿಯೋಜಿಸಿದೆ. ಅಧಿಕಾರಿಗಳು ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸಿ ತಕ್ಷಣ ಸ್ಪಂದಿಸಿ ಅವರ ಕುಂದು ಕೊರತೆ ನೀಗಿಸಿದಾಗ ಒಬ್ಬ ಅಧಿಕಾರಿಯಾಗಿದ್ದಕ್ಕೂ ಸ್ವಾರ್ಥಕವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಮಳೆ ಮಾಪನ ಕೇಂದ್ರಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಆದಷ್ಟು ಬೇಗನೆ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ ಅವುಗಳ ದುರಸ್ತಿ ಕಾರ್ಯ ಮಾಡಬೇಕು. ವಿಳಂಬ ಮಾಡಿದರೆ ರೈತರಿಗೆ ಇನ್ಶೂರೆನ್ಸ್ ಪಡೆಯಲು ಹಿನ್ನಡೆಯಾಗುತ್ತದೆ. ಯಾವುದೇ ಕಾರಣಕ್ಕೂ ರೈತರಿಗೆ ತಮ್ಮ ಸೌಲಭ್ಯ ಪಡೆಯಲು ತೊಂದರೆ ಆಗಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.