ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯ ಏಳು ಅಭಿವೃದ್ಧಿ ನಿಗಮಗಳಲ್ಲಿ 2013-14ರಿಂದ 2020-21ರವರೆಗೆ ವಿವಿಧ ಯೋಜನೆಗಳಡಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಅಸಲನ್ನು ಪೂರ್ಣವಾಗಿ ಪಾವತಿಸಿದರೆ ಒಂದು ಬಾರಿಗೆ ಅನ್ವಯಿಸುವಂತೆ ಬಡ್ಡಿ ಮನ್ನಾ
ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯ ಏಳು ಅಭಿವೃದ್ಧಿ ನಿಗಮಗಳಲ್ಲಿ 2013-14ರಿಂದ 2020-21ರವರೆಗೆ ವಿವಿಧ ಯೋಜನೆಗಳಡಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಅಸಲನ್ನು ಪೂರ್ಣವಾಗಿ ಪಾವತಿಸಿದರೆ ಒಂದು ಬಾರಿಗೆ ಅನ್ವಯಿಸುವಂತೆ ಬಡ್ಡಿ ಮನ್ನಾ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಅಸಲು ಮೊತ್ತವನ್ನು ಆರು ತಿಂಗಳ ಒಳಗಾಗಿ ಪಾವತಿಸಿದರೆ ಮಾತ್ರ ಬಡ್ಡಿ ಮನ್ನಾ ಅನ್ವಯವಾಗುವಂತೆ ಷರತ್ತು ವಿಧಿಸಿದ್ದು, ನಿರ್ಧಾರದಿಂದ ಫಲಾನುಭವಿಗಳ ಸಾಲದ ಮೇಲಿನ ಒಟ್ಟು ₹236.04 ಕೋಟಿ ಬಡ್ಡಿ ಮನ್ನಾ ಆಗಲಿದೆ.
2026-27ನೇ ಸಾಲಿನ ಬಜೆಟ್ ನಲ್ಲಿ 2021ರ ಮಾ.31 ಅಂತ್ಯದವರೆಗೆ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ ನಿಗಮಗಳಿಂದ ಪಡೆದ ಸಾಲದ ಅಸಲನ್ನು ಪಾವತಿಸುವವರಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಒಂದು ಬಾರಿಗೆ ತೀರುವಳಿ ಯೋಜನೆ (ಓಟಿಎಸ್) ಜಾರಿಗೆ ತರುವುದಾಗಿ ಘೋಷಿಸಲಾಗಿತ್ತು.
ಏಳು ನಿಗಮಗಳಲ್ಲಿ ₹977.81 ಕೋಟಿ ಸಾಲ ಬಾಕಿ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಏಳು ನಿಗಮಗಳ ಫಲಾನುಭವಿಗಳಿಗೆ 2021ರ ಮಾರ್ಚ್ 31ರವರೆಗೆ ವಿವಿಧ ಯೋಜನೆಗಳಡಿ ವಿತರಿಸಿರುವ ಸಾಲದ ಅಸಲು ಬಾಕಿ ಒಟ್ಟು ₹977.81 ಕೋಟಿ ಆಗಿದ್ದು, ಈ ಮೊತ್ತದ ಮೇಲೆ ₹236.04 ಕೋಟಿ ಬಡ್ಡಿ ಬಾಕಿ ಇದೆ.
ಬಾಕಿ ಅಸಲು ₹885.12 ಕೋಟಿ ಹಾಗೂ ಬಡ್ಡಿ ₹216.64 ಕೋಟಿ
ಇದರಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೀಡಲಾಗಿರುವ ಸಾಲದ ಬಾಕಿ ಅಸಲು ₹885.12 ಕೋಟಿ ಹಾಗೂ ಬಡ್ಡಿ ₹216.64 ಕೋಟಿಯಾಗಿದೆ.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಸಾಲದ ಬಾಕಿ ಅಸಲು ₹8.70 ಕೋಟಿ ಹಾಗೂ ಬಡ್ಡಿ ₹1.61 ಕೋಟಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಸಲು ₹71.13 ಕೋಟಿ ಹಾಗೂ ಬಡ್ಡಿ ₹15.24 ಕೋಟಿ ಇದೆ.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಸಲು ₹10.51 ಕೋಟಿ ಹಾಗೂ ಬಡ್ಡಿ ₹2.06 ಕೋಟಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಸಲು ₹32 ಲಕ್ಷ ಹಾಗೂ ಬಡ್ಡಿ ₹6.43 ಲಕ್ಷ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಸಲು ₹55.93 ಲಕ್ಷ ಹಾಗೂ ಬಡ್ಡಿ ₹12.10 ಲಕ್ಷ ಮತ್ತು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಸಲು ₹1.46 ಕೋಟಿ ಹಾಗೂ ಬಡ್ಡಿ ₹28.55 ಲಕ್ಷ ಇದೆ.
