;Resize=(412,232))
ಚನ್ನರಾಯಪಟ್ಟಣ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಟ್ರಕ್ ಮತ್ತು ಬಸ್ ಅಪಘಾತದಲ್ಲಿ ಹಾಸನ ಜಿಲ್ಲೆಯ ಮಾನಸ (26) ಹಾಗೂ ಮಂಡ್ಯ ಜಿಲ್ಲೆಯ ನವ್ಯಾ (26) ಸಜೀವ ದಹನವಾಗಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಾನಸ (26) ಹಾಗೂ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಅಂಕನಹಳ್ಳಿಯ ನವ್ಯಾ (26) ಬಾಲ್ಯಸ್ನೇಹಿತೆಯರು. ನವ್ಯ ಅವರ ಕುಟುಂಬ ಕಳೆದ 30 ವರ್ಷಗಳಿಂದ ಚನ್ನರಾಯಪಟ್ಟಣದಲ್ಲಿ ವಾಸವಾಗಿದೆ. ಬಾಲ್ಯಸ್ನೇಹಿತೆಯರಾದ ಇವರು ನಗರದ ಪೂರ್ಣಚಂದ್ರ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿಯ ತನಕ ವ್ಯಾಸಂಗ ಮಾಡಿದ್ದು, ನಂತರ, ಹಾಸನದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದರು. ಬಳಿಕ, ಬೆಂಗಳೂರಿನಲ್ಲಿ ಎಂ.ಟೆಕ್ ಮುಗಿಸಿ, ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನವ್ಯಗೆ ಮದುವೆ ಗೊತ್ತಾಗಿದ್ದು, ಜನವರಿ 25ಕ್ಕೆ ಆರತಕ್ಷತೆ ಕಾರ್ಯ ನಡೆಯಬೇಕಿತ್ತು. ಏ.29ಕ್ಕೆ ಮದುವೆ ಫಿಕ್ಸ್ ಆಗಿತ್ತು. ಮಾನಸ ಕೂಡ ಪಕ್ಕದ ಮನೆಯವನನ್ನೇ ವರಿಸಲು ನಿರ್ಧರಿಸಿದ್ದು, ಕುಟುಂಬಸ್ಥರು ಇಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದರು.
ಕ್ರಿಸ್ಮಸ್ ರಜೆಯ ಕಾರಣ ಈ ಇಬ್ಬರು ಗೆಳತಿಯರು ದೇವರ ದರ್ಶನಕ್ಕಾಗಿ ಬೆಂಗಳೂರಿನಿಂದ ಬುಧವಾರ ರಾತ್ರಿ ಸ್ನೇಹಿತೆ ಮಿಲನಾ ಜೊತೆ ಸಿಗಂದೂರು ಮತ್ತು ಮುರುಡೇಶ್ವರಕ್ಕೆ ಹೊರಟಿದ್ದರು. ಬಸ್ ದುರಂತದಲ್ಲಿ ಮಿಲನಾ ಗಾಯಗೊಂಡಿದ್ದು, ಚಿಕಿತ್ಸೆ ಪಡಿಯುತ್ತಿದ್ದಾರೆ. ಇವರಿಬ್ಬರು ಸಜೀವ ದಹನವಾಗಿದ್ದಾರೆ.
ಇಬ್ಬರೂ ಲಕ್ಷಣವಾಗಿದ್ದರು. ಮಾನಸ ಕೆಲಸಕ್ಕೆ ಸೇರುವ ಮುನ್ನ ಮಕ್ಕಳಿಗೆ ಟ್ಯೂಶನ್ ಮಾಡುತ್ತಿದ್ದರು. ಅವರ ಅಪ್ಪ ಬಾರ್‌ವೊಂದರಲ್ಲಿ ಕೆಲಸ ಮಾಡಿಕೊಂಡು, ಬಂದ ಸಂಬಳದಲ್ಲಿಯೇ ಮಗಳನ್ನು ಎಂಜಿನಿಯರ್ ಮಾಡಿಸಿದ್ದರು.