ಕನ್ನಡಪ್ರಭ ವಾರ್ತೆ ಬೆಂಗಳೂರು
ವೈದ್ಯಕೀಯ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಅತಿಸಾರ ಬೇಧಿಯಿಂದ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಆಯೋಗದಿಂದ ನೋಟಿಸ್ ಜಾರಿ ಮಾಡಿದ್ದಾರೆ.ಪ್ರಕರಣದ ಬಗ್ಗೆ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಗೆ ಆಗಮಿಸಿದ ಅವರು, ವಿದ್ಯಾರ್ಥಿನಿಲಯದಲ್ಲಿ ರಿಪೇರಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಪೂರೈಸಿರುವ ಬಗ್ಗೆ, ನೈರ್ಮಲ್ಯ ಕೊರತೆ ಹಾಗೂ ತಿಗಣೆ ಕಾಟ ಸೇರಿದಂತೆ ಹಲವು ದೂರು ಬಂದಿದೆ. ಹೀಗಾಗಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ಐಸಿಯು ಹಾಗೂ ಜನರಲ್ ವಾರ್ಡ್‌ನಲ್ಲಿರುವ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ್ದೇನೆ. ಅನೇಕ ವಿದ್ಯಾರ್ಥಿನಿಯರು ಪ್ರಜ್ಞೆ ಇಲ್ಲದೇ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಘಟನೆ ಸಂಬಂಧ ಬಿಎಂಸಿಆರ್‌ಐ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯೋಗದಿಂದ ನೋಟಿಸ್ ನೀಡಲಾಗಿದೆ ಎಂದರು.ಹಾಸ್ಟೆಲ್‌ನ 2ನೇ ಮಹಡಿಯಲ್ಲಿ ವಾಟರ್ ಟ್ಯಾಂಕ್ ರಿಪೇರಿಯಲ್ಲಿದೆ. ಅದೇ ನೀರನ್ನು ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈಗಾಗಲೇ ಹಾಸ್ಟೆಲ್ ಅಡುಗೆ ಕೋಣೆಯನ್ನು ಮುಚ್ಚಿಸಲಾಗಿದೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ಹಾಸ್ಟೆಲ್ ರೂಂಗಳು ಚಿಕ್ಕದಾಗಿದ್ದು, ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.
- - -ಕೊಳಚೆ ನೀರು ಪರೀಕ್ಷೆ ನಡೆಸಿ, ವರದಿ ನೀಡಿ: ಜಲಮಂಡಳಿಗೆ ಪಾಲಿಕೆ ಸೂಚನೆಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ರೋಗ ಹರಡುವಿಕ್ಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೊಳಚೆ ನೀರು ಮಾದರಿ ಪರೀಕ್ಷಿಸಿ ವರದಿ ನೀಡುವಂತೆ ಬೆಂಗಳೂರು ಜಲಮಂಡಳಿಗೆ ಬಿಬಿಎಂಪಿ ಸೂಚಿಸಿದೆ.ಬೇಸಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ನಿಯಂತ್ರಿಸಲು ಜಲಮಂಡಳಿಯ ಸಹಕಾರ ಅತ್ಯಗತ್ಯವಾಗಿದೆ. ನಗರದಲ್ಲಿ ಕಾಲರಾ ರೋಗದ ಪತ್ತೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಕಾಲರಾ ಹಾಗೂ ಸಾಂಕ್ರಾಮಿಕ ರೋಗ ವರದಿಯಾದ ಪ್ರದೇಶಗಳಲ್ಲಿ ಮ್ಯಾನ್ ಹೋಲ್ ಮತ್ತು ಎಸ್‌ಟಿಪಿಗಳಲ್ಲಿ ಕೊಳಚೆ ನೀರಿನಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕಿದೆ. ಜತೆಗೆ, ಜಲಮಂಡಳಿಯ ನೀರಿನ ಶುದ್ದೀಕರಣ ಘಟಕಗಳು ಮತ್ತು ಕೊನೆಯ ಹಂತದ ವಿತರಣೆಯ ನೀರಿನ ಮಾದರಿಗಳಲ್ಲಿ ಕ್ಲೋರಿನೇಷನ್ ಮಟ್ಟ ನಿಯಮಾನುಸಾರ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜಲಮಂಡಳಿಗೆ ಕೋರಿದೆ.
ಯಾವುದಾದರೂ ನೀರಿನ ಕೊಳವೆಗಳು ಸೋರಿಕೆ ಇದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕ್ರಮಗಳ ಬಗ್ಗೆ ಕಾರ್ಯಕ್ರಮ ಅಧಿಕಾರಿಗಳು (ಐಎಚ್ಐಪಿ) ಬಿಬಿಎಂಪಿ ಇ-ಮೇಲ್ dsubbmp@gmail.com ಗೆ ಕಳುಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.