ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಎಂಜಿನಿಯರಿಂಗ್ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಏರ್ಪಡಿಸಿದ್ದ ಸಿಇಟಿ/ಕಾಮೆಡ್-ಕೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಸಾಧನೆ ಮಾಡುವುದರ ಜೊತೆಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯೋಗಾವಕಾಶಗಳಲ್ಲಿ ಮುಂದೆ ಸಾಗಲು ಸಾಧ್ಯವಾಗಲಿದೆ. ಶಿಕ್ಷಣದ ಆಯ್ಕೆ ಒತ್ತಡದಿಂದಲ್ಲ, ತಿಳುವಳಿಕೆ ಮತ್ತು ಮಾರ್ಗದರ್ಶನದಿಂದ ಆಗಬೇಕು ಎಂದರು.
ಪಿಯು ಫಲಿತಾಂಶದ ನಂತರ ದೊರೆಯುವ ನಾಲ್ಕು ತಿಂಗಳ ಕಾಲಾವಕಾಶವನ್ನು ವಿದ್ಯಾರ್ಥಿಗಳು, ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಗೆ ಹೊಂದುವ ಶಿಕ್ಷಣ ಮತ್ತು ವೃತ್ತಿ ಮಾರ್ಗವನ್ನು ಹುಡುಕಿಕೊಳ್ಳಲು ಬಳಸಿಕೊಳ್ಳಬೇಕು. ತಮ್ಮ ಬಲಗಳ ಆಧಾರದ ಮೇಲೆ ವಿವಿಧ ಕೋರ್ಸ್‌ಗಳು, ಕಾಲೇಜುಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದು ಹೇಳಿದರು.ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ, ಕಂಪನಿಗಳು ಕೇವಲ ಪದವೀಧರರನ್ನು ಮಾತ್ರವಲ್ಲದೆ, ಸಮಾಜ ಮತ್ತು ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ನವೀನತೆ, ಸಂಶೋಧನೆ, ಉದ್ಯಮ ಪೋಷಣೆ, ಹೊಸ ಉದ್ಯಮಶೀಲತಾ ಸಂಸ್ಕೃತಿ ಹಾಗೂ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡುವ ಕಾಲೇಜುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.
ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಅನೇಕ ವಿದ್ಯಾರ್ಥಿ ವೇತನದ ಸೌಲಭ್ಯ ನೀಡಲಾಗುತ್ತಿದ್ದು, ಅಂಗವಿಕಲರಿಗೆ, ಕೋವಿಡ್ ನಲ್ಲಿ ಮೃತರಾದ ಪೋಷಕರ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿ ವೇತನದ ಕುರಿತಾಗಿ ಕಾಲೇಜಿನ ಲೆಕ್ಕಪತ್ರ ವಿಭಾಗದ ಸತೀಶ್ ಮಾಹಿತಿ ನೀಡಿದರು.
ಕಾಲೇಜಿನ ಪ್ರವೇಶಾತಿ ಸಮಿತಿಯ ಮುಖ್ಯಸ್ಥರಾದ ಡಾ.ಮೋಯಿನುದ್ದಿನ್ ಖಾನ್, ಡಾ.ಸುರೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು. ಆಡಳಿತ ವಿಭಾಗದ ಸಿಬ್ಬಂದಿ ಹೇಮಲತಾ ನಿರೂಪಿಸಿದರು.
* ಕೆಇಎ ನೀಡುವ ಸೀಕ್ರೆಟ್-ಕೀ ಸುರಕ್ಷಿತವಾಗಿ ಸಂಗ್ರಹಿಸಿಡಿ.
* ಆಯ್ಕೆ ಮಾಡುವ ಕಾಲೇಜುಗಳು, ಎನ್.ಬಿ.ಎ (NBA) ಹಾಗೂ ನ್ಯಾಕ್ (NAAC) ಮಾನ್ಯತೆ ಪಡೆದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* "ಕೋರ್ಸ್ ಮುಖ್ಯವೋ ಅಥವಾ ಕಾಲೇಜು ಮುಖ್ಯವೋ” ಎಂಬುದರ ಕುರಿತು ನಿಮ್ಮ ಆದ್ಯತೆಯನ್ನು ಮೊದಲೇ ನಿರ್ಧರಿಸಿಕೊಳ್ಳಿ.
* ಪ್ರವೇಶ ಶುಲ್ಕವನ್ನು ನಿಮ್ಮ ಸ್ವಂತ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಿ.
* ನಾವೀನ್ಯತೆ ಮತ್ತು ಪ್ರಾಯೋಗಿಕ ಆಧಾರಿತ ಕಲಿಕೆಗೆ ಆದ್ಯತೆ ನೀಡುವ ಕಾಲೇಜುಗಳನ್ನು ಆಯ್ಕೆ ಮಾಡಿ.