ನಗರದ ಕುಂಬರವಾಡ ಸರ್ವೆ ನಂ. 51/1ರಲ್ಲಿರುವ ಡಾ.ಅಂಬೇಡ್ಕರ ಸಮುದಾಯ ಭವನಕ್ಕೆ ಮೀಸಲಾಗಿರುವ ಜಾಗದಲ್ಲಿ ನಡೆದಿರುವ ಕ್ರೈಸ್ತ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಆಗ್ರಹಿಸಿದರು.
ನಗರದ ಕುಂಬರವಾಡ ಸರ್ವೆ ನಂ. 51/1ರಲ್ಲಿರುವ ಡಾ.ಅಂಬೇಡ್ಕರ ಸಮುದಾಯ ಭವನಕ್ಕೆ ಮೀಸಲಾಗಿರುವ ಜಾಗದಲ್ಲಿ ನಡೆದಿರುವ ಕ್ರೈಸ್ತ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಆಗ್ರಹಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಕುಂಬಾರವಾಡದ ಸರ್ವೆ ನಂ. 51/1ರಲ್ಲಿರುವ ಜಾಗದಲ್ಲಿ ಡಾ. ಅಂಬೇಡ್ಕರ ಜಯಂತಿ, ಬುದ್ಧ ಪೂರ್ಣಿಮೆ, ಮಹಾಪರಿನಿರ್ವಾಣ ದಿನ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೇ 18ರಂದು ಆ ಜಾಗದಲ್ಲಿದ್ದ ನೀಲಿ ಧ್ವಜವನ್ನು ಜೋಷಪ್ಪ ಕೊಡೇಕರ್ ಹಾಗೂ ಅವರ ಧರ್ಮಪತ್ನಿ ಅಂಗನವಾಡಿ ಶಿಕ್ಷಕಿ ಶೋಭಾರಾಣಿ ಎನ್ನುವವರು ಉದ್ದೇಶ ಪೂರ್ವಕವಾಗಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯಂತೆ ಸಮಸ್ಯೆ ಬಗೆಹರಿಯುವ ವರೆಗೆ ಯಾರೂ ಆ ಜಾಗಕ್ಕೆ ಹೋಗಬಾರದು ಎಂಬ ನಿರ್ದೇಶನವನ್ನು ಪಾಲಿಸಲಾಗಿತ್ತು. ಆದರೆ ಅದೇ ರಾತ್ರಿ ಜೋಷಪ್ಪ ಹಾಗೂ ಶೋಭಾರಾಣಿ ಪೋಲಿಸರ ಎದುರೆ ಕ್ರಿಶ್ಚಿಯನ್ ಧ್ವಜ ಹಾರಿಸಿದ್ದಾರೆ. ಪೋಲಿಸರ ಕುಮ್ಮಕ್ಕಿನಿಂದ ಈ ಕೃತ್ಯ ಜರುಗಿದೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಇದರ ಹಿಂದಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕುಂಬರವಾಡಾದಲ್ಲಿ ಶಾಂತಿಯುತವಾಗಿ ಬದುಕುತ್ತಿರುವ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ಬೌದ್ದೆ ಆಗ್ರಹಿಸಿದರು.ಸರ್ವೆ ನಂ. 51/1ರಲ್ಲಿರುವ 75 ಮತ್ತು 80 ಅಡಿ ವಿಸ್ತೀರ್ಣದ ಜಾಗವನ್ನು ಅಧಿಕೃತವಾಗಿ ಅಂಬೇಡ್ಕರ ಸಮುದಾಯ ಭವನಕ್ಕಾಗಿ ಮೀಸಲು ಎಂದು ದಾಖಲಿಸಬೇಕು, ನೀಲಿ ಧ್ವಜ ತೆರವುಗೊಳಿಸಿದ ಆರೋಪ ಎದುರಿಸುತ್ತಿರುವ ಅಂಗನವಾಡಿ ಶಿಕ್ಷಕಿ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು, ಆಗಸ್ಟ್ 15ರಂದು ಧ್ವಜ ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಕುಂಬರವಾಡಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪರ್ಯಾಯ ಸರ್ಕಾರಿ ಜಾಗವನ್ನು ಆಯ್ಕೆ ಮಾಡಬೇಕು, ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಜಾಗವನ್ನು ಶೀಘ್ರ ಮಂಜೂರು ಮಾಡಬೇಕು. ನೀಲಿ ಧ್ವಜ ತೆರುವುಗೊಳಿಸಲು ಸಹಕರಿಸಿದ ಪೋಲಿಸ್ ಸಿಬ್ಬಂದಿ ಮನೋಜ್‌ನನ್ನು ಹಾಗೂ ಪ್ರಕರಣ ದಾಖಲಿಸಿದರೂ ಕ್ರಮ ಜರುಗಿಸದ ಗಾಂಧಿಗಂಜ್ ಇನ್ಸಪೆಕ್ಟರ್ ಅನಂದ ಅವರನ್ನು ಅಮಾನತು ಮಾಡಬೇಕು ಎಂದು ಬೌದ್ದೆ ಒತ್ತಾಯಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ಮಾತನಾಡಿದರು. ಶುದ್ಧೋಧನ ಮಹಾಮಾಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಕಡಿಮನಿ, ದಲಿತ ಮುಖಂಡರಾದ ಸುಭಾಷ ವರ್ಮಾ, ವಿಠಲದಾಸ್ ಪ್ಯಾಗೆ, ರಾಜಕುಮಾರ ಮೂಲಭೂತಿ, ಅಂಬದಾಸ್ ಗಾಯಕವಾಡ, ಸುನೀಲ ಸಂಗಮ, ಶ್ರೀಪತರಾವ್ ದೀನೆ, ಶಿವಕುಮಾರ ನಿಲಿಕಟ್ಟೆ, ಭರತ ಕಾಂಬ್ಳೆ, ಸುಬ್ಬಣ್ಣ ಕರಕನಳ್ಳಿ, ಸದಾನಂದ ಕಾಳೆಕಾರ್, ಗೌತಮ ಭೋಸಲೆ, ಮಲ್ಲಿಕಾರ್ಜುನ ಮೋಳಕೆರೆ, ಸತೀಶ ಕಡೆಮಾನಿ, ತುಕಾರಾಮ ಕಡೆಮಾನಿ, ಸಾಯಿನಾ ಕಾಳೇಕರ್, ಸಿದ್ದಾರ್ಥ ಕಾಂಬ್ಳೆ ಹಾಗೂ ಇತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.