ಚಿಕ್ಕಮಗಳೂರು , ಕಾಫಿ ನಾಡಿನಾದ್ಯಂತ ಬುಧವಾರ ಏಸು ಕ್ರಿಸ್ತರ ಜನ್ಮ ದಿನವನ್ನು ಕ್ರಿಸ್ ಮಸ್ ಹಬ್ಬವನ್ನಾಗಿ ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ವಿಶೇಷ ಅಲಂಕಾರದಿಂದ ಕಂಗೊಳಿಸಿದ ಚರ್ಚ್‌ಗಳು । ಮಂಗಳವಾರ ರಾತ್ರಿಯಿಂದಲೇ ವಿಶೇಷ ಪೂಜೆ - ಪ್ರಾರ್ಥನೆ,
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು
ಕಾಫಿ ನಾಡಿನಾದ್ಯಂತ ಬುಧವಾರ ಏಸು ಕ್ರಿಸ್ತರ ಜನ್ಮ ದಿನವನ್ನು ಕ್ರಿಸ್ ಮಸ್ ಹಬ್ಬವನ್ನಾಗಿ ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಚರ್ಚ್‌ಗಳಿಗೆ ಕಳೆದ ಒಂದು ವಾರದಿಂದ ದೀಪಾಲಂಕಾರ ಮಾಡಲಾಗಿದ್ದು, ಏಸು ಕ್ರಿಸ್ತರ ಜನ್ಮ ವೃತ್ತಾಂತ ತಿಳಿಸುವ ಗೋದಳಿಯನ್ನು ನಿರ್ಮಾಣ ಮಾಡಲಾಗಿದೆ. ಕ್ರೈಸ್ತ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಚರ್ಚ್‌ಗಳಿಗೆ ತೆರಳುವಾಗ ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿತ್ತು.
ಚಿಕ್ಕಮಗಳೂರು ನಗರದಲ್ಲಿ ಸಂತ ಜೋಸೇಫರ ಪ್ರಧಾನಾಲಯ, ಗೌರಿ ಕಾಲುವೆಯಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್, ಜ್ಯೋತಿ ನಗರದ ಲ್ಲಿರುವ ಕ್ರಿಸ್ತರಾಜರ ದೇವಾಲಯ ಹಾಗೂ ಬೇಲೂರು ರಸ್ತೆಯಲ್ಲಿರುವ ಸಂತ ಅಂದ್ರಿಯಾ ದೇವಾಲಯಗಳಲ್ಲಿ ಕ್ರಿಸ್ ಮಸ್ ಆಚರಿಸಲಾಯಿತು.
ನಗರದ ಸಂತ ಜೋಸೇಫರ ಪ್ರಧಾನಾಲಯದಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಸುಮಾರು 2 ಗಂಟೆಗಳ ಕಾಲ ಬಿಷಪ್ ಡಾ. ಅಂತೋಣಿಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ನೂರಾರು ಭಕ್ತರಿಗೆ ಆಶೀರ್ವಚನ ನೀಡಿ ಏಸು ಕ್ರಿಸ್ತರು, ಮಾನವನ ರೂಪದಲ್ಲಿ ಜನಿಸಿದ ದೇವರು. ಅವರು ಶಾಂತಿ, ಪ್ರೀತಿ, ಅನ್ಯೋನ್ಯತೆ, ಸೌಹಾರ್ದತೆಯಿಂದ ಜೀವನ ನಡೆಸಲು ಮಾರ್ಗದರ್ಶನ ನೀಡಿದ್ದರು. ನಾವುಗಳು ಅವರ ಸಂದೇಶ ಪಾಲನೆ ಮಾಡಬೇಕು ಎಂದು ನುಡಿದರು.
ಬುಧವಾರ ಬೆಳಿಗ್ಗೆ 6 ಗಂಟೆ ಹಾಗೂ 8.30 ಕ್ಕೆ ಸಂತ ಜೋಸೇಫರ ಪ್ರಧಾನಾಲಯದಲ್ಲಿ ಪೂಜೆ ನಡೆಯಿತು. ಸುಮಾರು 2 ಸಾವಿರ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಇಲ್ಲಿ ನಿರ್ಮಾಣ ಮಾಡಲಾಗಿರುವ ಗೋದಳಿಯನ್ನು ವೀಕ್ಷಣೆ ಮಾಡಲು ಕ್ರೈಸ್ತರು ಸೇರಿದಂತೆ ಅನ್ಯ ಧರ್ಮೀಯರು ಸಹ ಆಗಮಿಸುತ್ತಿದ್ದರು.
ಸಂಜೆ ಏಸು ಕ್ರಿಸ್ತರ ಜನನ ವೃತ್ತಾಂತ ತಿಳಿಸುವ ಧ್ವನಿ ಬೆಳಕು ಕಾರ್ಯಕ್ರಮ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಬಿಷಪ್ ಡಾ. ಅಂತೋಣಿಸ್ವಾಮಿ ಹಾಜರಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. 25 ಕೆಸಿಕೆಎಂ 4ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಿಕ್ಕಮಗಳೂರಿನ ಗೌರಿ ಕಾಲುವೆಯ ಹೋಲಿ ಫ್ಯಾಮಿಲಿ ಚರ್ಚ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.