ಕುಕನೂರು: ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯಿಂದ ಬಾಧಿತರಾಗುವ ಜನರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಶನಿವಾರ ಮನವಿ ಸಲ್ಲಿಸಿದರು.
ರಸ್ತೆ ಅಗಲೀಕರಣಕ್ಕೆ ರೈತರ ಭೂಮಿ ಹಾಗೂ ಮನೆಗಳ ಭಾಗದ ಅಗತ್ಯವಿದ್ದಲ್ಲಿ ಪ್ರಸ್ತುತ ಇರುವ ಅಧಿಕೃತ ದಾಖಲೆಗಳ ಪ್ರಕಾರ ನಷ್ಟವಾಗುವ ಆಸ್ತಿಯ ಭಾಗಕ್ಕೆ ಸೂಕ್ತ ಮಾರುಕಟ್ಟೆ ದರದ ಪರಿಹಾರ ನೀಡಬೇಕು. ಅಷ್ಟೇ ಅಲ್ಲದೆ, ವಶಪಡಿಸಿಕೊಂಡ ನಂತರ ಉಳಿಯುವ ಜಮೀನು ಮತ್ತು ನಿವೇಶನದ ಗಡಿ ಗುರುತಿಸಿ, ಸಂಬಂಧಪಟ್ಟ ಇಲಾಖೆಗಳಿಂದ ಅದರ ಪರಿಪೂರ್ವ ಅಧಿಕೃತ ದಾಖಲಾತಿ ಪಟ್ಟಣ ಪಂಚಾಯಿತಿಯೇ ಸ್ವಯಃ ಮಾಡಿಸಿಕೊಡಬೇಕು. ಪ್ರಾಸ್ತಾವಿಕ ಚರಂಡಿ ನಿರ್ಮಾಣ ಮಾಡುವ ಮುನ್ನ ಅಂಬೇಡ್ಕರ್ ವೃತ್ತದಿಂದ ನೀರು ಹೇಗೆ ಹರಿದು ಹೋಗುತ್ತದೆ. ಅದು ಎಲ್ಲಿಗೆ ತಲುಪುತ್ತದೆ. ನುರಿತ ಇಲಾಖಾ ಇಂಜಿನಿಯರ್‌ಗಳ ಮೂಲಕ ಇಲ್ಲಿನ ಜನರಿಗೆ ನಕ್ಷೆ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಮನವರಿಕೆ ಮಾಡಿಕೊಡಬೇಕು. ಪೇವರ್ಸ್ ಅಳವಡಿಕೆ, ರಸ್ತೆ ದೀಪ, ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಹುಳ್ಳಿ, ತಾಲೂಕು ಗೌರವಾಧ್ಯಕ್ಷ ಶರಣಪ್ಪ ಚಂಡೂರು,ತಾಲೂಕು ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ, ಶಿವಪ್ಪ ಯಡಿಯಾಪುರ, ರೇವಣೆಪ್ಪ ಹಟ್ಟಿ, ಬಸವರಾಜ ಲಾಳಗಂಡರ್, ಹೊನ್ನಪ್ಪ ಶಿರೂರು, ಗಂಗಾಧರ, ನಾರಾಯಣಿ, ಮುತ್ತಪ್ಪ ಶಿರೂರು, ಶಿವಪ್ಪ ಕೊಂಡಿ, ಬುಡ್ಡಪ್ಪ ಯಡಿಯಾಪುರ, ನಿಂಗಪ್ಪ ಶಿರೂರು, ಶ್ರೀಕಾಂತ ಶಿರೂರು, ರಮೇಶ ಬಂಡಾರಿ ಇತರರಿದ್ದರು.