ಹಾನಗಲ್ಲ: ಅಪರಾಧಿಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಗರಿಕರು ಅತ್ಯಂತ ಜವಾಬ್ದಾರಿಯಿಂದ ಬದುಕು ನಿರ್ವಹಿಸುವ ಅನಿವಾರ್ಯತೆಯಲ್ಲಿದ್ದಾರೆ ಎಂದು ನ್ಯಾಯವಾದಿ ವೀರನಗೌಡ ಪಾಟೀಲ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚನ್ನವೀರೇಶ ರೂಢಗಿ, ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹತ್ತು ಹಲವು ಸೌಲಭ್ಯಗಳಿವೆ. ಅವನ್ನು ಪಡೆಯುವಲ್ಲಿ ಕಾಳಜಿಯಿಂದ ಮುಂದಾಗಬೇಕು. ಇಳಿವಯಸ್ಸಿನಲ್ಲಿ ನೆಮ್ಮದಿಯ ದಿನಗಳನ್ನು ಕಳೆಯಲು ಬೇಕಾಗುವ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಉತ್ತಮ ಪರಿಸರದಲ್ಲಿ ಒಳ್ಳೆಯ ಒಡನಾಟದಲ್ಲಿ ದಿನಗಳನ್ನು ಸುಂದರಗೊಳಿಸುವ ಯತ್ನ ಹಿರಿಯ ನಾಗರಿಕರಿಂದಾಗಲಿ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎನ್. ಪಾಟೀಲ, ಹಿರಿಯ ನಾಗರಿಕರಿಗಾಗಿ ನೂರಾರು ಕಾನೂನುಗಳಿವೆ. ಆದರೆ ಅವು ನಮಗೆ ಸಿಗುವ ಸಾಧ್ಯತೆಗಳೇ ಕಡಿಮೆಯಾಗಿದೆ. ಬ್ಯಾಂಕು, ಸರ್ಕಾರಿ ಕಚೇರಿಗಳಲ್ಲಿ ನಮ್ಮ ಕೆಲಸಕ್ಕಾಗಿ ಅಲೆದಾಡುವ ಹಾಗೂ ಕೆಲಸವಾಗದೇ ಸಾಕಷ್ಟು ಬಾರಿ ಪರಿತಪಿಸುವ ಸಂದರ್ಭಗಳಿವೆ. ಪುಸ್ತಕದ ಕಾನೂನು ಜಾರಿಯಾಗಲು ಇಲಾಖೆಗಳು ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ, ಆಶು ನದಾಫ, ನಿವೃತ್ತ ನೌಕರರ ಸಂಘದ ಖಜಾಂಚಿ ಅಶೋಕ ದಾಸರ, ಕಾರ್ಯದರ್ಶಿ ಆರ್.ಎಫ್. ತಿರುಮಲೆ, ಎಸ್.ಸಿ. ದುಮ್ಮೇರ, ಜಗದೀಶ ಗಂಟನವರ, ಲಕ್ಷ್ಮಣ ಬಾರ್ಕಿ, ಎಚ್.ಐ. ನಾಯಕ, ಲೀಲಾವತಿ ಪೂಜಾರ, ಕಲ್ಲಪ್ಪ ಚಿಕ್ಕೆರಿ, ಅಪರಾಧ ವಿಭಾಗದ ಪೊಲೀಸ್ ಮಂಜುನಾಥ ಈ ಸಂದರ್ಭದಲ್ಲಿದ್ದರು.