20 ವರ್ಷಗಳ ದೇಶಸೇವೆ ಪೂರ್ಣಗೊಳಿಸಿದ ‘ಐಸಿಜಿಎಸ್ ಸಾವಿತ್ರಿಬಾಯಿ ಫುಲೆ’ ನಿವೃತ್ತಿ

KannadaprabhaNewsNetwork |  
Published : Sep 20, 2026, 03:15 AM IST
 | Kannada Prabha

ಸಾರಾಂಶ

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದ ಈ ನೌಕೆಯಲ್ಲಿ 5 ಅಧಿಕಾರಿಗಳು ಹಾಗೂ 35 ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದರು

ಕಾರವಾರ: ಭಾರತೀಯ ತಟರಕ್ಷಕ ಪಡೆಯ ಪ್ರಮುಖ ಗಸ್ತು ನೌಕೆಯಾದ ‘ಐಸಿಜಿಎಸ್ ಸಾವಿತ್ರಿಬಾಯಿ ಫುಲೆ’ 20 ವರ್ಷಗಳ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿ ಸೆ.19 ಶನಿವಾರದಂದು ಅಧಿಕೃತವಾಗಿ ಸೇವೆಯಿಂದ ನಿವೃತ್ತಿಗೊಂಡಿದೆ ಎಂದು ಭಾರತೀಯ ತಟರಕ್ಷಕ ಪಡೆಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ ಕುಮಾರ್ ಮಿಶ್ರಾ ತಿಳಿಸಿದರು.ನಗರದ ಬೈತಕೋಲದ ವಾಣಿಜ್ಯ ಬಂದರು ಪ್ರದೇಶದಲ್ಲಿರುವ ಕೋಸ್ಟ್‌ಗಾರ್ಡ್ ಜಟ್ಟಿಯ ಬಳಿ ಶನಿವಾರ ನಡೆದ ನೌಕೆಯ ನಿವೃತ್ತಿ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದ ಈ ನೌಕೆಯಲ್ಲಿ 5 ಅಧಿಕಾರಿಗಳು ಹಾಗೂ 35 ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಶಕ್ತಿಶಾಲಿ ಇಂಜಿನ್‌ಗಳನ್ನು ಹೊಂದಿದ್ದ ನೌಕೆಯು ಭಾರತದ ಕರಾವಳಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.ಕಮಾಂಡಿಂಗ್ ಅಧಿಕಾರಿ ಗೌರವ ಶ್ರೀವಾತ್ಸವ್ ಮಾತನಾಡಿ, ಅಕ್ಟೋಬರ್ 2006ರಲ್ಲಿ ತಟರಕ್ಷಕ ಪಡೆಯ ಸಕ್ರಿಯ ಸೇವೆಗೆ ಸೇರ್ಪಡೆಗೊಂಡಿದ್ದ ‘ಸಾವಿತ್ರಿಬಾಯಿ ಫುಲೆ’ ನೌಕೆಯು ಕಡಲ ಗಡಿಗಳ ಕಾವಲು, ಕಳ್ಳಸಾಗಣೆ ತಡೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿತ್ತು. ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾವಿಕರು ಹಾಗೂ ಮೀನುಗಾರರ ರಕ್ಷಣೆಗೆ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ತಿಳಿಸಿದರು.ಸೇವೆಯಿಂದ ನಿವೃತ್ತಿಗೊಂಡ ಬಳಿಕ ನೌಕೆಯನ್ನು ಸದ್ಯ ಆಮದಳ್ಳಿ ತಟರಕ್ಷಕ ಪಡೆಯ ನೆಲೆಯಲ್ಲೇ ಇರಿಸಲಾಗುವುದು. ಬಳಿಕ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು.ದೇಶದ ಪ್ರಮುಖ ಸಮಾಜ ಸುಧಾರಕಿ ಹಾಗೂ ಮಹಿಳಾ ಶಿಕ್ಷಣದ ಹರಿಕಾರೆಯಾದ ಸಾವಿತ್ರಿಬಾಯಿ ಫುಲೆ ಅವರ ಸ್ಮರಣಾರ್ಥ ನೌಕೆಗೆ ಅವರ ಹೆಸರನ್ನು ಇಡಲಾಗಿತ್ತು. ತಟರಕ್ಷಕ ಪಡೆಯ ಈ ಸರಣಿಯ ನೌಕೆಗಳಿಗೆ ದೇಶದ ಧೀರ ವನಿತೆಯರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರ ಹೆಸರುಗಳನ್ನು ಇಡುವ ಪರಂಪರೆಯಿದ್ದು, ಸಾವಿತ್ರಿಬಾಯಿ ಫುಲೆ ಅವರ ಶಿಸ್ತು, ತ್ಯಾಗ, ಸಮರ್ಪಣೆ ಮತ್ತು ಏಕಾಗ್ರತೆಯ ಮೌಲ್ಯಗಳನ್ನು ನೌಕೆಯ ಸೇವಾ ವೈಖರಿಯೂ ಪ್ರತಿಬಿಂಬಿಸಿತ್ತು.ಅಮದಳ್ಳಿಯಲ್ಲಿ ಕೋಸ್ಟ್‌ಗಾರ್ಡ್ ನೆಲೆ ವಿಸ್ತರಣೆ

ತಾಲೂಕಿನ ಆಮದಳ್ಳಿ ಕರಾವಳಿ ನೆಲೆಯಲ್ಲಿ ಭಾರತೀಯ ತಟರಕ್ಷಕ ಪಡೆಯ ಮೂಲಸೌಕರ್ಯ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಜೆಟ್ಟಿಯನ್ನು ತನ್ನ ಸುಪರ್ದಿಗೆ ಪಡೆಯಲಾಗಿದೆ. ಪ್ರಸ್ತುತ ಇಲ್ಲಿ ‘ಕಸ್ತೂರ್ಬಾ ಗಾಂಧಿ’ ನೌಕೆ ಸೇರಿದಂತೆ ವೇಗದ ಗಸ್ತು ನೌಕೆಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾವಲು ನೌಕೆಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಪ್ರವೀಣ ಕುಮಾರ್ ಮಿಶ್ರಾ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ