ಕಾರವಾರ: ಬಿಣಗಾ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಆಯಕಟ್ಟಿನ ಕೆಲಸಗಳಿಗೆ ಕೌಶಲ್ಯಯುತ ಕಾಯಂ ಕಾರ್ಮಿಕರನ್ನು ನೇಮಿಸಿ, ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಲು, ಅವಘಡ ತಡೆಗಟ್ಟಿ ಜನತೆಯ ಜೀವ ಭದ್ರತೆಗೆ ವೈಜ್ಞಾನಿಕ ಕ್ರಮ ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದೆ.ಬಿಣಗಾದ ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಂ ಇಂಡಸ್ಟ್ರೀಸ್‌ನ ಕ್ಲೋರಿನ್ ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆ ದುರ್ಘಟನೆಯಿಂದ ಅನೇಕ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಆತಂಕಕ್ಕೀಡು ಮಾಡಿದೆ. ಕೆಲವು ತಿಂಗಳ ಹಿಂದೆ ಒಬ್ಬ ಕಾರ್ಮಿಕ ಕೆಲಸದ ಸ್ಥಳದಲ್ಲಿ ಮೃತಪಟ್ಟಿದ್ದರು.ಘಟಕದಲ್ಲಿ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಕಾರ್ಮಿಕರ ಬದುಕಿನ ಬಗ್ಗೆ ಕಾಳಜಿ ಇಲ್ಲದ ಆಡಳಿತ ಮಂಡಳಿ ಮತ್ತು ಕಾಲ ಕಾಲಕ್ಕೆ ತಪಾಸಣೆ ಮಾಡಿ ಮೇಲುಸ್ತುವಾರಿ ಮಾಡಿ ಕೆಲಸದ ಸ್ಥಳದಲ್ಲಿ ಸುರಕ್ಷೆಯ ಮಾನದಂಡ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕಾದ ಕಾರ್ಮಿಕ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಉಂಟಾಗಿದೆ.
ಘಟನೆಯಿಂದ ಕಾರವಾರ ಸುತ್ತಲಿನ ಜನ ಚಿಂತೆಗೀಡಾಗಿದ್ದಾರೆ. ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಕುಟುಂಬ ಅವಲಂಬಿತರು ಸದಾ ಅಭದ್ರತೆಯಲ್ಲೇ ಕಾಲ ಕಳೆಯುವಂತಾಗಿದೆ.ಕಾರ್ಖಾನೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಕ್ರಮ ಮತ್ತು ಸುರಕ್ಷತಾ ಆಡಿಟ್ ಮಾಡಿಸಿ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಗೆ ವರದಿ ಸಲ್ಲಿಸಲು ಸೂಚಿಸಿ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಲು ನಿಷೇಧಾಜ್ಞೆ ಹೊರಡಿಸಿದೆ.ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಕೂಡಲೇ ಆಡಳಿತ ಮಂಡಳಿಯ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಬೇಕು. ಕಾರ್ಮಿಕರ ಜೀವನ ಭದ್ರತೆ, ಕೆಲಸದ ಭದ್ರತೆ ಮತ್ತು ಹಕ್ಕುಗಳ ರಕ್ಷಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಫ್ಯಾಕ್ಟರಿಯ ಆಯಕಟ್ಟಿನ ಸ್ಥಳಕ್ಕೆ ಕೌಶಲ್ಯ ಇರುವ ಕಾಯಂ ನೌಕರನ್ನು ನೇಮಿಸಬೇಕು. ಅವರಿಗೆ ಎಲ್ಲ ಭದ್ರತೆ ಒದಗಿಸಬೇಕು.ಗುತ್ತಿಗೆ ಪದ್ಧತಿ ರದ್ದು ಮಾಡಿ ಮತ್ತು ಈಗ ಇರುವವರಿಗೆ ಕಾಯಂಮಾತಿ ಮಾಡಬೇಕು. ಕಾಯಂ ಅಲ್ಲದ ಇನ್ನಿತರ ಯಾವುದೇ ರೂಪದಲ್ಲಿ ಉದ್ಯೋಗಕ್ಕೆ ನೇಮಿಸಿಕೊಳ್ಳುವ ಕ್ರಮವನ್ನು ರದ್ದು ಮಾಡಬೇಕು. ಅಪಘಾತದಿಂದ ತತ್ತರಿಸಿದ ಕಾರ್ಮಿಕರಿಗೆ ಸೂಕ್ತ ನ್ಯಾಯೋಚಿತ ಪರಿಹಾರ ನೀಡಬೇಕು.ಇನ್ನು ಮುಂದೆ ಇಂತಹ ದುರ್ಘಟನೆ ಸಂಭವಿಸದಂತೆ ತೀವ್ರ ನಿಗಾ ವಹಿಸಬೇಕು. ಈ ಬಗ್ಗೆ ಆಡಳಿತ ಮಂಡಳಿಗೆ ತಾಕೀತು ಮಾಡಬೇಕು. ಕಾರ್ಮಿಕರ ಬದುಕಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ಅವಘಡ ತಡೆಗಟ್ಟಲು ವೈಜ್ಞಾನಿಕ ಕ್ರಮ ಅನುಸರಿಸಬೇಕು.ಜಿಲ್ಲಾಡಳಿತದ ಮುತುವರ್ಜಿಯಲ್ಲಿ ಕಾಯಂ ಮತ್ತು ಗುತ್ತಿಗೆ ಕಾರ್ಮಿಕ ಸಂಘಟನೆಗಳೊಂದಿಗೆ ಸಿಐಟಿಯು ಒಳಗೊಂಡು ಜಂಟಿ ಸಭೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಂಘಟನೆಯ ಪದಾಧಿಕಾರಿಗಳಾದ ಯಮುನಾ ಗಾಂವಕರ, ತಿಲಕ ಗೌಡ, ಸಿ.ಆರ್. ಶಾನಭಾಗ, ನಾಗಪ್ಪ ನಾಯ್ಕ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಗೋರೆಯಲ್ಲಿ ವಿವೇಕಾನಂದ ಜಯಂತ್ಯುತ್ಸವ
ಕುಮಟಾ: ಇಡೀ ವಿಶ್ವವೇ ಭಾರತೀಯ ಶಿಕ್ಷಣದತ್ತ ಮುಖ ಮಾಡುವಂಥ ಶಿಕ್ಷಣ ಭಾರತದೆಲ್ಲೆಡೆ ದೊರೆಯುವಂತಾಗಲಿ ಎಂದು ಅಖಿಲ ಭಾರತ ಪ್ರಜ್ಞಾ ಪ್ರವಾಜ ಪ್ರಮುಖ ರಘುನಂದನ್ ತಿಳಿಸಿದರು.ತಾಲೂಕಿನ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಸಹಯೋಗದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೬೨ನೇ ಜಯಂತ್ಯುತ್ಸವ ಉದ್ಘಾಟಿಸಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ಗುರು- ಶಿಷ್ಯ ಸಂಬಂಧ, ವಿಶ್ವ ಭ್ರಾತೃತ್ವ, ಬ್ರಹ್ಮಚರ್ಯ ಪಾಲನೆ, ಅನುಷ್ಠಾನ, ವೇದಾಂತ ಕುರಿತು ವಿಶೇಷ ಉಪನ್ಯಾಸ ಮಾಡಿದರು.
ರಾಷ್ಟ್ರೀಯ ಮಲ್ಲಕಂಬ ಪಟು ಅಮೋಘ ಸಾಂಭಯ್ಯ ಹಿರೇಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ದೇಶಭಕ್ತಿಯ ಜತೆಗೆ ಭಗತ್ ಸಿಂಗ್, ಕುದಿರಾಮ್ ಭೋಸ್, ವೀರ ಸಾವರಕರ ಅವರಂಥ ಮಹಾನ್ ದೇಶಭಕ್ತರ ಜೀವನಾದರ್ಶಗಳನ್ನೂ ಅಳವಡಿಸಿಕೊಳ್ಳಬೇಕು. ಉನ್ನತವಾಗಿ ಆಲೋಚಿಸಿ, ಆದರ್ಶವಾಗಿ ಬದುಕಿ ಎಂದರು.ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕ ಡಾ. ಜಿ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್ ಮತ್ತು ಪ್ರಶಿಕ್ಷಣ ಭಾರತಿ ವತಿಯಿಂದ ನಡೆಸಿದ ಚರ್ಚೆ, ಆಶುಭಾಷಣ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ರಾಮ ಭಟ್ಟ ಸ್ವಾಗತಿಸಿದರು. ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಂಯೋಜಕ ಅಭಿಷೇಕ ಜಿ.ಒ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರನಾರಾಯಣ ಉಪಾಧ್ಯಾಯ ವಂದಿಸಿದರು. ಪೂಜಾ ಭಟ್ಟ ನಿರೂಪಿಸಿದರು.