ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗದ ದೇವದುರ್ಗದ 6 ಮಂದಿಯನ್ನು ಅಮಾನತುಗೊಳಿಸಿ, ಲಿಂಗಸುಗೂರಿನಲ್ಲೂ ಸುಮಾರು 50 ಮಂದಿ ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ದ ಜಿಲ್ಲಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೇರಿದ ಸಂಘದ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಅಗತ್ಯ ಸವಲತ್ತುಗಳನ್ನು ನೀಡದೇ, ಅನಗತ್ಯವಾಗಿ ನೌಕರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತಿರುವುದನ್ನು ಖಂಡಿಸಿ, ಗಣತಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ, ಘೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಅಂಗನವಾಡಿ ನೌಕರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹತ್ತಾರು ಯೋಜನೆಗಳನ್ನು ಜನರ ಮನೆಗಳಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹೀಗೆ ಒತ್ತಡದಲ್ಲಿಯೇ ಕೆಲ-ಕಾರ್ಯಗಳನ್ನು ಮಾಡುವ ನೌಕರರಿಗೆ ಇದೀಗ ಗಣತಿ ಹಾಗೂ ಬಿಎಲ್‌ಒ ಕೆಲಸದ ಜವಾಬ್ದಾರಿ ಯನ್ನು ವಹಿಸಿರುವುದು ತರವಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಬಲವಂತವಾಗಿ ಸಮೀಕ್ಷೆ ಕಾರ್ಯವನ್ನು ಮಾಡಲೇ ಬೇಕು ಎಂದು ಸೂಚನೆ ನೀಡಿರುವ ಸರ್ಕಾರ ಯಾವುದೇ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ, ನಮ್ಮ ಮೊಬೈಲ್‌ಗಳಲ್ಲಿ ಆಪ್ ಡೌನ್‌ಲೋಡ್ ಆಗುತ್ತಿಲ್ಲ, ಇನ್‌ಟರ್ ನೆಟ್ ವೇಗವಾಗಿಲ್ಲ ಇಷ್ಟೇ ಅಲ್ಲದೇ ಸರಿಯಾದ ರೀತಿಯಲ್ಲಿ ತರಬೇತಿಯನ್ನು ಸಹ ನೀಡಿಲ್ಲ ಇದರಿಂದಾಗಿ ಸಮೀಕ್ಷೆ ಕಾರ್ಯವು ಸಾಕಷ್ಟು ಕಷ್ಟಕರವಾಗುತ್ತಿದೆ. ಇದ್ಯಾವುದನ್ನು ಪರಿಗಣಿಸದ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್ ಜಾರಿಗೊಳಿಸುವುದು ಹಾಗೂ ಅಮಾನತು ಮಾಡುತ್ತಿದ್ದುರುವನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಲಾಖೆಯ ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು, ಸಮೀಕ್ಷೆಯಿಂದ ನೌಕರರನ್ನು ಕೈಬಿಡಬೇಕು, ಕೆಲಸದಿಂದ ತೆಗೆದು ಹಾಕುವ ಬೆದರಿಕೆಗಳನ್ನು ನಿಲ್ಲಿಸಬೇಕು, ಅಮಾನತುಗೊಳಿಸಿರುವವರನ್ನು ವಾಪಸ್ಸು ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷೆ ಎಚ್.ಪದ್ಮಾ, ಪದಾಧಿಕಾರಿಗಳಾದ ವರಲಕ್ಷ್ಮೀ, ರಂಗಮ್ಮ ಅನ್ವರಿ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.