ಮಳೆ: ನದಿಗಳಲ್ಲಿ ಹೆಚ್ಚಿದ ನೀರು, ನೆರೆ ಆತಂಕ

KannadaprabhaNewsNetwork |  
Published : Sep 30, 2025, 02:00 AM IST
29ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಪಶ್ಚಿಮಘಟ್ಟ, ಮಹಾರಾಷ್ಟ್ರದ ಜೊತೆಗೆ ರಾಯಚೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಪ್ರಮಾಣವು ಹೆಚ್ಚಾಗುತ್ತಿದ್ದು, ನೆರೆ ಆತಂಕ ಶುರುವಾಗಿದೆ.

ರಾಯಚೂರು: ಪಶ್ಚಿಮಘಟ್ಟ, ಮಹಾರಾಷ್ಟ್ರದ ಜೊತೆಗೆ ರಾಯಚೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಪ್ರಮಾಣವು ಹೆಚ್ಚಾಗುತ್ತಿದ್ದು, ನೆರೆ ಆತಂಕ ಶುರುವಾಗಿದೆ.ಮಳೆಯಿಂದಾಗಿ ಈಗಾಗಲೇ ಪಕ್ಕದ ಯಾದಗಿರಿ, ವಿಜಯಪುರ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಭೀಮಾ ನದಿಯ ಹಬ್ಬರಕ್ಕೆ ಅಲ್ಲಿಯ ಜನ ತತ್ತರಿಸಿ ಹೋಗಿರುವ ಸಮಯದಲ್ಲಿ ಭರ್ತಿಗೊಂಡ ಜಲಾಶಯಗಳು ಸೇರಿ ಭೀಮಾ ನದಿಯಿಂದಲೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ತಾಲೂಕು ಅದರಲ್ಲಿಯೂ ಜಿಲ್ಲಾ ಕೇಂದ್ರವಾದ ರಾಯಚೂರು ಗ್ರಾಮೀಣ ಭಾಗದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಭೀತಿಯು ನಿರ್ಮಾಣಗೊಂಡಿದೆ.ನಾರಾಯಣಪುರ ಜಲಾಶಯದಿಂದ 1 ಲಕ್ಷ 35 ಸಾವಿರ ಕ್ಯುಸೆಕ್‌ ಹಾಗೂ ಸನ್ನತ್ತಿ ಬ್ಯಾರೇಜ್‌ನಿಂದ ಸುಮಾರು 4 ಲಕ್ಷ 50 ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿರುವುದರ ಪರಿಣಾಮವಾಗಿ ನದಿಯ ಸಂಗಮ ದಿಂದ ಮುಂಭಾಗದ ಪ್ರದೇಶದಲ್ಲಿ ಸುಮಾರು ಐದು ಲಕ್ಷಕ್ಕು ಅಧಿಕ ಕ್ಯುಸೆಕ್‌ ನೀರು ಹರಿಯುತ್ತಿರುವುದರಿಂದ ತಾಲೂಕಿನ ಗುರ್ಜಾಪುರ ಬ್ರೀಜ್ಡ್‌ ಕಂ ಬ್ಯಾರೇಜ್‌ ಜಲಾವೃತಗೊಂಡಿದೆ. ಈ ಸೇತುವೆ ಮುಳುಗಡೆ ಯಾಗಿದ್ದರಿಂದ ಯಾದಗಿರಿ ಜಿಲ್ಲೆಗೆ ಸಂಪರ್ಕಿಸುವ ಮಾರ್ಗದಲ್ಲಿ ಒಂದಾದ ಈ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ಜಮೀನು, ಪಂಪ್‌ಸೆಟ್‌ ನೀರು ಪಾಲು : ನದಿ ಮೇಲ್ಭಾಗದ ಜಲಾಶಯಗಳಾದ ಆಲಮಟ್ಟಿ ಹಾಗೂ ನಾರಾಯಣಪುರಗಳಿಂದ ಕೇವಲ 1 ಲಕ್ಷ 35 ಸಾವಿರ ಕ್ಯುಸೆಕ್‌ ನೀರು ಬಂದರೆ, ಭೀಮಾ ನದಿ ವ್ಯಾಪ್ತಿಯ ಸನ್ನತ್ತಿಯಿಂದ 4 ಲಕ್ಷ 50 ಸಾವಿರ ಕ್ಯುಸೆಕ್‌ ನೀರು ಸೇರಿ ಒಟ್ಟು ಐದಾರು ಲಕ್ಷ ಕ್ಯುಸೆಕ್‌ ನೀರು ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವುದರಿಂದ ನದಿ ತಟದ ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತ ಇತರೆ ಬೆಳೆಗಳು ಹಾಗೂ ರೈತರ ಪಂಪ್‌ ಸೆಟ್‌, ಮೋಟಾರ್‌ ಹಾಗೂ ಇತರೆ ಸಾಮಗ್ರಿಗಳು ನೀರುಪಾಲಾಗಿವೆ.

ಸತತವಾಗಿ ಮಳೆ ಸುರಿತು ತ್ರಾಸು ತಂತು ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ವಿವಿಧ ತಾಲೂಕು,ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯು ರೈತರು ಹಾಗೂ ಜನಸಾಮಾನ್ಯರಿಗೆ ಹತ್ತು ಹಲವು ತ್ರಾಸು ತಂದೊಡ್ಡಿದೆ. ಹೋದ ವಾರ ಜಿಲ್ಲೆಯಲ್ಲಿ ಒಟ್ಟು 129 ಸೆಮಿ ಮಳೆ ದಾಖಲಾಗಿದೆ. ಇದರಲ್ಲಿ ದೇವದುರ್ಗದಲ್ಲಿ 95 ಮಿಮೀ, ಲಿಂಗಸುಗೂರಿನಲ್ಲಿ 212, ಮಾನ್ವಿಯಲ್ಲಿ 148, ರಾಯಚೂರಿನಲ್ಲಿ 101, ಸಿಂಧನೂರಿನಲ್ಲಿ 130, ಮಸ್ಕಿಯಲ್ಲಿ 118 ಹಾಗೂ ಸಿರವಾರದಲ್ಲಿ 148 ಮಿಮೀ ನಷ್ಟು ಮಳೆ ಸುರಿದಿದೆ. ಸತತವಾಗಿ ಸುರಿದ ಜಿಟಿಜಿಟಿ ಮಳೆಯಿಂದಾಗಿ ಸುಮಾರು ಸಾವಿರ ಹೆಕ್ಟರ್‌ ಬೆಳೆ ಹಾಗೂ 20 ಕ್ಕು ಹೆಚ್ಚು ಮನೆಗಳು ಹಾನಿಗೀಡಾಗಿದ್ದು,ಒಬ್ಬ ವೃದ್ಧೆ ಸಾವನಪ್ಪಿದ್ದಾಳೆ. ಮೂರ್ನಾಲ್ಕು ಜರಿಗೆ ಗಾಯಗಳಾಗಿವೆ. ಅಧಿಕೃತವಾಗಿ ಸಮೀಕ್ಷೆ ನಡೆಸಿ ಮಳೆ ಹಾನಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಹಾಗೂ ಡಿಸಿ ನಿತೀಶ್‌ ಕೆ. ಅವರು ಈಗಾಗಲೇ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ಸಹ ನೀಡಿದ್ದಾರೆ.

ಅ.13ಕ್ಕೆ ಬೆಳೆ ಹಾನಿ, ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆರಾಯಚೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆದ ಬೆಳೆಗಳು ಹಾನಿಗೀಡಾಗಿದ್ದು, ಜಿಲ್ಲಾಡಳಿತ ಸರಿಯಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಅ.13 ಕ್ಕೆ ನಗರದ ಜಿಲ್ಲಾಡಳಿತದ ಭವನದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್‌ ಸಂಘಟನೆ (ಎಐಕೆಎಸ್‌) ರಾಜ್ಯ ಸಂಚಾಲಕ ಬಸವಲಿಂಗಪ್ಪ ಒತ್ತಾಯಿಸಿದರು.ಸೋಮವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿ, ಮಳೆಯಿಂದಾಗಿ ಹತ್ತಿ, ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ ಸೇರಿ ಹಲವಾರು ಬೆಳೆಗಳು ಹಾನಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಬೇಕು, ಹತ್ತಿ ಬೆಳೆದ ರೈತರಿಗೆ ಪ್ರತಿಕ್ವಿಂಟಲ್‌ಗೆ 15 ಸಾವಿರ ಬೆಂಬಲ ಬೆಲೆ ಘೋಷಿಸಬೇಕು, ಹತ್ತಿ ಆಮದು ನೀತಿ ಮತ್ತು ಸುಂಕ ಹೆಚ್ಚಳವನ್ನು ರದ್ದು ಪಡಿಸಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಈ ಪ್ರತಿಭಟನೆ ಮುಖಾಂತರ ಆಗ್ರಹಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿ.ಮುದುಕಪ್ಪ ನಾಯಕ, ಯಲ್ಲಪ್ಪ ನಾಯಕ ಕುರ್ಡಿ, ಪ್ರಸಾದ, ಯಲ್ಲಪ್ಪ ಮಲ್ಲಾಪುರ, ದೇಔಪ್ಪ, ಅಮರೇಶಪ್ಪ, ಈರಪ್ಪ ಸೇರಿ ಇತರರು ಇದ್ದರು. ಕಳೆದ ವಾರದಿಂದ ನಿರಂತರ ಮಳೆಗೆ ಭಾರಿ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ.ಅನೇಕ ಗ್ರಾಮಗಳಲ್ಲಿ ಮನೆಗಳು ಬಿದ್ದಿವಿ.ಕೂಡಲೇ ಸಮೀಕ್ಷೆ ಮಾಡಿ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು.

- ಡಾ.ಶರಣಬಸವ ಪಾಟೀಲ್ ಜೋಳದಹೆಡ್ಗಿ, ಅಧ್ಯಕ್ಷ, ಬಿಜೆಪಿ ಮಂಡಲ, ದೇವದುರ್ಗ

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ