ಇಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಜತೆ ಸಭೆ

KannadaprabhaNewsNetwork |  
Published : Sep 30, 2025, 02:00 AM IST
ಫೋಟೋ- ಮಂದರವಾಡ 1, 2, 3 ಮತ್ತು 4ಜೇವರ್ಗಿ ತಾಲೂಕಿನ ಭೀಮಾ ನದಿ ತೀರದಲ್ಲಿರುವ ಮಂದರವಾಡ ಮನೆಗಳಿಗೆ ನದಿ ನೀರು ನುಗ್ಗಿ ಭಾರಿ ತೊಂದರೆ ಎದುರಾಗಿದೆ. ಜನ ಕುಡಿಯುವ ನೀರನ್ನು ಬೋಟ್‌ನಲ್ಲಿ ತರುವಂತಾಗಿದೆ. | Kannada Prabha

ಸಾರಾಂಶ

ಕಳೆದೊಂದು ವಾರದಿಂದ ಜಿಲ್ಲೆಗೆ ಅಟಕಾಯಿಸಿಕೊಂಡಿದ್ದ ಮಳೆ, ಹೊಳೆ ಎರಡರಲ್ಲಿ ಕಳೆದ ಭಾನುವಾರ ರಾತ್ರಿಯಿಂದ ಮಳೆ ರಭಸ ತುಸು ತಗ್ಗಿದೆ, ಆದರೆ, ಭೀಮಾ ನದಿಯ ಪ್ರವಾಹದಲ್ಲಿ ಇಳಿಕೆ ಇನ್ನೂ ಕಂಡಿಲ್ಲ, ನೆರೆ ಪರಿಸ್ಥಿತಿ ಅಫಜಲಪುರ, ಕಲಬುರಗಿ, ಚಿತ್ತಾಪುರ, ಜೇವರ್ಗಿ, ಶಹಾಬಾದ್‌, ಸೇಡಂ, ಚಿಂಚೋಳಿ, ಕಾಳಗಿ ಸೇರಿದಂತೆ ಜಿಲ್ಲಾದ್ಯಂತ ಯಥಾಸ್ಥಿತಿ ಮುಂದುವರಿದಿದೆ.

ಕಲಬುರಗಿ: ಕಳೆದೊಂದು ವಾರದಿಂದ ಜಿಲ್ಲೆಗೆ ಅಟಕಾಯಿಸಿಕೊಂಡಿದ್ದ ಮಳೆ, ಹೊಳೆ ಎರಡರಲ್ಲಿ ಕಳೆದ ಭಾನುವಾರ ರಾತ್ರಿಯಿಂದ ಮಳೆ ರಭಸ ತುಸು ತಗ್ಗಿದೆ, ಆದರೆ, ಭೀಮಾ ನದಿಯ ಪ್ರವಾಹದಲ್ಲಿ ಇಳಿಕೆ ಇನ್ನೂ ಕಂಡಿಲ್ಲ, ನೆರೆ ಪರಿಸ್ಥಿತಿ ಅಫಜಲಪುರ, ಕಲಬುರಗಿ, ಚಿತ್ತಾಪುರ, ಜೇವರ್ಗಿ, ಶಹಾಬಾದ್‌, ಸೇಡಂ, ಚಿಂಚೋಳಿ, ಕಾಳಗಿ ಸೇರಿದಂತೆ ಜಿಲ್ಲಾದ್ಯಂತ ಯಥಾಸ್ಥಿತಿ ಮುಂದುವರಿದಿದೆ.

ಏತನ್ಮಧ್ಯೆ ಭೀಮಾ ನದಿಗೆ ಮಹಾರಾಷ್ಟ್ರದಿಂದ ಇನ್ನೂ ಹೆಚ್ಚುವರಿ ನೀರು ಹರಿದು ಬರುತ್ತಲೇ ಇದೆ. ಸನ್ನ ಬಾಂದಾರಿನ ಸೋಮವಾರದ ಒಳ ಹರಿವು 3ಲಕ್ಷ ಕ್ಯುಸೆಕ್‌ ಇತ್ತು, ಹೊರ ಹರಿವು ಕೂಡಾ ಅಷ್ಟೇ ನಿರ್ವಹಿಸಲಗುತ್ತಿದ್ದು ನದಿ ತೀರದಲ್ಲಿ ರೆಡ್‌ ಅಲರ್ಟ್‌ ಹಾಗೇ ಮುಂದುವರಿದಿದೆ.

ಭೀಮಾನದಿ ತುಂಬು ತುಳುಕುತ್ತಿರುವುದರಿಂದ ಈ ನದಿಯ ಉಪ ನದಿಗಳಾಗಿರುವ ಕಾಗಿಣಾ, ಕಮಲಾವತಿ, ಅಮರ್ಜಾ ನದಿಗಳಲ್ಲೂ ಬಾರಿ ಪ್ರವಾಹ ಬಂದಿದೆ. ಕಾಗಿಣಾ ಪ್ರವಾಹಕ್ಕೆ ಸೇಡಂ, ಚಿತ್ತಾಪುರ ನಲುಗಿದರೆ, ಅಮರ್ಜಾ, ಮುಲ್ಲಾಮಾರಿ, ಬೊಣ್ಣೆತೊರಾ ಪ್ರವಾಹಕ್ಕೆ ಕಮಲಾಪುರ, ಆಳಂದ, ಚಿಂಚೋಳಿ ತಾಲೂಕುಗಳು ನಲುಗಿವೆ.

ಸೇಡಂ- ಚಿಂಚೋಳಿ ಸಂಪರ್ಕಿಸುವ ಸಟಪಟನಹಳ್ಳಿ ಸೇತುವೆ ಮೇಲೆ ನದಿ ನೀರು ಹರಿಯುತ್ತಿದ್ದರೆ, ಮಲ್ಲಾಪಲ್ಲಿ ನಾಲಾದಿಂದಾಗಿ ಸೋನಾರ್‌ ತಾಂಡಾ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಮಳಖೇಡದಲ್ಲಿರುವ ಉತ್ತರಾದಿ ಮಠ, ಜಯತೀರ್ಥರ ಮೂಲ ವೃಂದಾವನಗಳು ಕಾಗಿಮಾ ನದಿಯಲ್ಲಿ ಜಲಾವೃತಗೊಂಡಿವೆ.

ಶಹಾಬಾದ್‌ ತಾಲೂಕಿನ ಮುತ್ತಗಿ ಹಾಗೂ ಹೊನಗುಟಾ ಗ್ರಾಮಗಳ ಕೆಲವು ಪ್ರದೇಶಗಳು ಭೀಮಾ ಹಾಗೂ ಕಿಗಾಮಾ ನದಿಯ ನೀರು, ಹಳ್ಳದ ನೀರಿನಿಂದ ಜಲಾವೃತಗೊಂಡಿವೆ. ವಾಡಿಯ ಪಕ್ಕದಲ್ಲಿರುವ ಕಡಬೂರು ಮುಳುಗಡೆಯಾಗುವ ಹಂತದಲ್ಲಿದೆ. ಸದ್ಯ ಈ ಊರಿಗೆ ಹೋಗಲು ತೆಪ್ಪವೇ ಗತಿಯಾಗಿದೆ. ಜನ ಹೈರಾಣಲ್ಲಿದ್ದು ಅದ್ಯಾವಾಗ ನದಿ ನೀರು ಇಳಿಯುವುದೋ ಎಂದು ಕಾಯುವಂತಾಗಿದೆ.

ಜೇವರ್ಗಿ ಬಳಿಯ ಕಟ್ಟಿ ಸಂಗಾವಿ ಭೀಮಾ ಸೇತುವೆ ಕಳೆದ 3 ದಿನದಿಂದ ಜಲಾವೃತಗೊಂಡು ಸಂಚಾರ ನಿಲ್ಲಿಸಲಾಗಿತ್ತು. ಈ ಭಾನುವಾರ ಸೇತುವೆಯ ನೀರು ತುಸು ಇಳಿಮುಖವಾಗಿದೆಯಾದರೂ ಸಂಚಾರಕ್ಕೆ ನಿಷೇಧ ಮುಂದುವರಿದಿದೆ.

ಚಿಂಚೋಳಿಯಲ್ಲಿಯೂ ಮಳೆ ಅಬ್ಬರ ತಗ್ಗಿದೆಯಾದರೂ ಮುಲ್ಲಾಮಾರಿ ನದಿ ರಭಸದಲ್ಲಿದೆ, ಅನೇಕ ಹಳಳಗಳು ತುಂಬಿ ಹರಿಯುತ್ತಿವೆ. ಕಾಳಗಿ, ಯಡ್ರಾಮಿಯಲ್ಲಿಯೂ ಮಳೆಯಿಂದಾಗಿ ನಾಲಾಗಳು ನೀರಿನಿಂದ ತುಂಬಿ ತುಳುಕುತ್ತಿವೆ.

ಇದುವರೆಗೂ 4, 775 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. 41 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ದಂಡೋತಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಭಾರಿ ಅಡಚಣೆ ಎದುರಾಗಿದೆ. ಸೇಡಂ- ಕಲಬುರಗಿ, ಸೇಡಂ- ಚಿಂಚೋಳಿಯ ಮಾರ್ಗದಲ್ಲಿ ಮಳೆ, ನೆರೆ ನೀರು ಸಂಗಮಿಸಿದ್ದರಿಂದ ಸಂಚಾರಕ್ಕೆ ಭಾರಿ ಸಂಚಕಾರ ಎದುರಾಗಿದೆ.

ಸೊನ್ನ ಅಣೆಕಟ್ಟೆ ಭರ್ತಿ:

ಮಹಾರಾಷ್ಟ್ರದಿಂದ ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಅಫಜಲಪುರದಲ್ಲಿರುವ ಸೊನ್ನ ಬಾಂದಾರು ತುಂಬಿ ತುಳುಕುತ್ತಿದೆ. ಸೊನ್ನ ಬ್ಯಾರೇಜ್ ನೀರಿನ ಸಾಮರ್ಥ್ಯ ಇರೋದೇ 3.166 ಟಿಎಂಸಿ, ಇದೀಗ ಗರಿಷ್ಠ ಮಟ್ಟ ತಲುಪಿದೆ. ಸೊನ್ನ ಬ್ಯಾರೇಜ್ ಗೆ ಸಧ್ಯ ಒಳಹರಿವು 3 ಲಕ್ಷ 30 ಸಾವಿರ ಕ್ಯುಸೆಕ್‌, ಅಷ್ಟೇ ಪ್ರಮಾಣದಲ್ಲಿ ಸೊನ್ನ ಬ್ಯಾರೇಜ್ ನಿಂದ ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಬ್ಯಾರೇಜ್ ಕೇಳಭಾಗದ ಹಳ್ಳಿಗಳಿಗೆ ನೀರು ನುಗ್ಗುತ್ತಿದೆ. ಸೊನ್ನ ಬ್ಯಾರೇಜ್ ಕೇಳಭಾಗದಲ್ಲಿರುವ ದೇವಣಗಾಂವ ಸೇತುವೆಯ ಮಟ್ಟಕ್ಕೆ ಹರಿಯುತ್ತಿರುವ ಭೀಮಾ ನದಿ ನೀರು ಇನ್ನೊಂದು ಅಡಿ ನೀರು ಹೆಚ್ಚಾದ್ರೆ ಕಲಬುರಗಿ-ವಿಜಯಪುರ ಸಂಪರ್ಕ ಕಡಿತ ಸಾಧ್ಯತೆ ಇದೆ.

ಇಂದು ಸಿಎಂ ಕಲಬುರಗಿ ಭೇಟಿ

ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ