ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ತಾವಾಗಿಯೇ ಮುಂದೆ ಬಂದು ಉಚಿತ ಹೃದಯ ರೋಗ ತಪಾಸಣೆ ಕಾರ್ಡ್ ವಿತರಿಸುತ್ತಿರುವ ಇಂಡಿಯಾನಾ-ಎಸ್‌ಜೆಎಂ ಹಾರ್ಟ್ ಸೆಂಟರ್‌ನ ಸಾಮಾಜಿಕ ಬದ್ಧತೆ ಇತರರಿಗೆ ಮಾದರಿಯಾಗಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇಂಡಿಯಾನಾ ಎಸ್‌ಜೆಎಂ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಚಿತ ಹೃದಯ ರೋಗ ತಪಾಸಣೆ ಕಾರ್ಡ್‍ಗಳನ್ನು ವಿತರಿಸಿ ಮಾತನಾಡಿದ ಅವರು, ರಾತ್ರಿ ಹಗಲು ಎನ್ನದೇ ಬದ್ಧತೆಯಿಂದ ಕೆಲಸ ನಿರ್ವಹಿಸುವ ಪತ್ರಕರ್ತರು ಸ್ವತಃ ಆರೋಗ್ಯ ಕಾಳಜಿಯನ್ನು ಮರೆಯುತ್ತಾರೆ. ಇದನ್ನು ಅರಿತು ಇಂಡಿಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಓಪಿಡಿ ಸೇವೆ ಹಾಗೂ ರಿಯಾಯಿತಿ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆರೋಗ್ಯವೇ ಭಾಗ್ಯವಾಗಿದ್ದು ಅದು ಸರಿ ಇದ್ದರೆ ಬೇಕಾದ ಸಾಧನೆ ಮಾಡಬಹುದು. ನಮ್ಮಲ್ಲೇ ಮೊದಲು ಎನ್ನುವ ಧಾವಂತಕ್ಕೆ ಬಿದ್ದು ಸುದ್ದಿಯನ್ನು ಬಿತ್ತಿರಿಸುವ ಒತ್ತಡದಲ್ಲಿ ಪತ್ರಕರ್ತರು ಇದ್ದಾರೆ. ಇದಕ್ಕೆ ಬದಲಾಗಿ ಸುದ್ದಿಯ ಸತ್ಯಾಸತ್ಯತೆ ಪರಾಮರ್ಶಿಸಿ ಸುದ್ದಿ ಬಿಡುಗಡೆ ಮಾಡಲು ಮುಂದಾಗಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಪತ್ರಕರ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಪತ್ರಕರ್ತರು ಕೆಲಸದ ನಡುವೆ ತಮ್ಮನ್ನು ಹಾಗೂ ಕುಟುಂಬವನ್ನು ಮರೆತು ಬಿಡುತ್ತಾರೆ. ಇತ್ತೀಚಿಗೆ 40 ರಿಂದ 45 ವರ್ಷದವರು ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಪ್ರಕರಣ ರಾಜ್ಯದಾದ್ಯಂತ ಚರ್ಚೆಯಲ್ಲಿತ್ತು. ಪತ್ರಕರ್ತರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಜಿಲ್ಲೆಯ ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ವರದಿ ಮಾಡುತ್ತೀರಿ. ಇದರ ಜೊತೆಗೆ ಇಂದಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಆರೋಗ್ಯದ ಕಾಳಜಿ ಕುರಿತಾದ ಲೇಖನ ಹಾಗೂ ಸುದ್ದಿಗಳನ್ನು ಸಹ ಪ್ರಕಟಿಸುವ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು. ಆರೋಗ್ಯವನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಉತ್ತಮ ಆಹಾರ ಹಾಗೂ ದೈಹಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂದಿನ ವಾತಾವರಣ ಕಲುಷಿತವಾಗಿದೆ. ಆಹಾರ ಬೆಳೆಗಳಲ್ಲಿ ಸಹ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ ಎಂದು ಬಿ.ವಿ.ಮಲ್ಲಿಕಾರ್ಜುನಯ್ಯ ವಿಷಾದ ವ್ಯಕ್ತಪಡಿಸಿದರು.
ಮೊಬೈಲ್ ಬಂದಾಗಿನಿಂದ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕುಸಿಯುತ್ತಿದೆ. ಎಲ್ಲಾ ಸುದ್ದಿಗಳು ಸಹ ಮೊಬೈಲ್‍ನಲ್ಲಿ ಸಿಗುತ್ತಿವೆ. ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆಯೂ ಓದುಗರನ್ನು ಉಳಿಸಿಕೊಂಡು ಪತ್ರಿಕೋದ್ಯಮವನ್ನು ಸಹ ಉಳಿಸಿಕೊಳ್ಳುವ ಜವಾಬ್ದಾರಿ ವರದಿಗಾರರ ಮೇಲಿದೆ. ಇದರ ನಡುವೆ ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸಿ ಇಂಡಿಯಾನಾ-ಎಸ್ ಜೆಎಂ ಹಾರ್ಟ್ ಸೆಂಟರ್ ಉಚಿತ ಹೃದಯ ರೋಗ ತಪಾಸಣೆ ಕಾರ್ಡ್ ವಿತರಿಸುವುದು ಅಭಿನಂದನಾರ್ಹವಾಗಿದೆ.ಪತ್ರಕರ್ತರ ಜೊತೆಗೆ ಪತ್ರಿಕಾ ವಿತರಕರು ಸಹ ಹಗಲಿರಲು ದುಡಿಯುತ್ತಾರೆ. ಇಂಡಿಯಾ-ಎಸ್.ಜೆ.ಎಂ ಹಾರ್ಟ್ ವಿತರಕರಿಗೂ ಉಚಿತ ತಪಾಸಣೆ ಕಾರ್ಡ್‍ಗಳನ್ನು ವಿತರಿಸುವಂತೆ ಬಿ.ವಿ.ಮಲ್ಲಿಕಾರ್ಜುನಯ್ಯ ಕೋರಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂರಾವ್,ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ, ಇಂಡಿಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್ ಕುಮಾರ್ ಶೆಟ್ಟಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿ ವಿರೇಶ್ ವಿ ಅಪ್ಪು, ಖಜಾಂಚಿ ಡಿ. ಕುಮಾರಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗೇಶ್, ಹೆಚ್.ತಿಪ್ಪೇಸ್ವಾಮಿ, ಪರಶುರಾಂಪುರ ಮಂಜುನಾಥ್, ರವಿ ಉಗ್ರಾಣ, ಸಿ.ರಾಜಶೇಖರ್, ನವೀನ್ ಕುಮಾರ್, ಹಿರಿಯ ಪತ್ರರ್ಕರಾದ ಹರಿಯಬ್ಬೆ ಸಿ ಹೆಂಜಾರಪ್ಪ, ಶ.ಮಂಜುನಾಥ್ ಮತ್ತಿತರರು ಇದ್ದರು.