ತಗ್ಗಿದ ಪ್ರವಾಹ, ತಗ್ಗದ ಬವಣೆ : ಕಲ್ಯಾಣ ಕರ್ನಾಟಕ ಜನರ ಹಾಹಾಕಾರ

KannadaprabhaNewsNetwork |  
Published : Sep 30, 2025, 01:00 AM IST
ಯಾದಗಿರಿಯಲ್ಲಿ ಪ್ರವಾಹ | Kannada Prabha

ಸಾರಾಂಶ

ಕಳೆದೆರಡು ದಿನಗಳಿಗೆ ಹೋಲಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಮತ್ತು ನೆರೆ ಕಡಿಮೆಯಾಗಿದೆ. ಆದರೆ, ಜನರ ಬವಣೆ ಕಡಿಮೆಯಾಗಿಲ್ಲ. ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್‌ ಹಾಗೂ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿ    ಸಂಕಷ್ಟ ಹಾಗೆಯೇ ಮುಂದುವರಿದೆ.

  ಬೆಂಗಳೂರು :  ಕಳೆದೆರಡು ದಿನಗಳಿಗೆ ಹೋಲಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಮತ್ತು ನೆರೆ ಕಡಿಮೆಯಾಗಿದೆ. ಆದರೆ, ಜನರ ಬವಣೆ ಕಡಿಮೆಯಾಗಿಲ್ಲ.

ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್‌ ಹಾಗೂ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಜನರ ಸಂಕಷ್ಟ ಹಾಗೆಯೇ ಮುಂದುವರಿದೆ.

ಭೀಮಾ ಒಳಹರಿವು 5.10 ಲಕ್ಷ ಕ್ಯುಸೆಕ್‌ ನಿಂದ 4.75 ಲಕ್ಷ ಕ್ಯುಸೆಕ್‌ಗೆ ಇಳಿದಿದ್ದರೂ, ಯಾದಗಿರಿ ನಗರದ ಭೀಮಾ ನದಿಗಂಟಿಕೊಂಡ ಬಡಾವಣೆಗಳು ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಸುರಕ್ಷಿತ ಸ್ಥಳಗಳಿಗೆ ಜನರನ್ನು ಕಳುಹಿಸುವ ಕೆಲಸ ಈಗಲೂ ಮುಂದುವರಿದಿದೆ. ಅನೇಕ ಮನೆಗಳು ಭಾಗಶಃ ನೀರಲ್ಲಿ ಮುಳುಗಿದ್ದರಿಂದ ಹಾಗೂ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಕೆಲವರು ಮನೆಯ ಮಾಳಿಗೆಗಳ ಮೇಲೆ ಅಂಗೈಯಲ್ಲಿ ಜೀವ ಹಿಡಿದು ರಾತ್ರಿಗಳನ್ನು ಕಳೆಯುತ್ತಿದ್ದಾರೆ. 

ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಎದ್ದಿದೆ. ಜಿಲ್ಲಾಡಳಿತ, ಪೊಲೀಸ್‌ ಹಾಗೂ ರಕ್ಷಣಾ ಸಿಬ್ಬಂದಿಗಳು ತಮ್ಮ ಜೀವ ಪಣಕ್ಕಿಟ್ಟು ಪರಿಹಾರ ಹಾಗೂ ನೆರವಿನ ಕಾರ್ಯಾಚರಣೆಗಳಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಯಾದಗಿರಿ ಹೊರವಲಯದಲ್ಲಿ ಸೋಮವಾರ ಭೀಮಾ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಈಜಾಡಿ ರಕ್ಷಣೆ ಮಾಡಲಾಗಿದೆ.

ನದಿ ನೀರಿನಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿರುವ ಶಹಾಪುರ ತಾಲೂಕಿನ ರೋಜಾ ಎಸ್. ಶಿರವಾಳ, ಯಾದಗಿರಿ ತಾಲೂಕಿನ ತಳಕ ಗ್ರಾಮಗಳ ಜನರನ್ನು ಅಗ್ನಿಶಾಮಕ ಸಿಬ್ಬಂದಿಯವರು ಸೋಮವಾರ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮದ ಮನೆಗಳಿಗೆ ನದಿಯ ನೀರು ನುಗ್ಗಿದ್ದು, ಜನ ಕುಡಿಯುವ ನೀರನ್ನು ಬೋಟ್‌ನಲ್ಲಿ ತರುವಂತಾಗಿದೆ.

ಕೃಷ್ಣಾ ನದಿಯ ಒಳಹರಿವು ಹೆಚ್ಚಿದ್ದು, ರಾಯಚೂರು ತಾಲೂಕಿನ 15ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುರ್ಜಾಪುರ ಸೇತುವೆ ಜಲಾವೃತವಾಗಿದ್ದು, ರೈತರ ಪಂಪ್‌ಸೆಟ್‌, ಜಮೀನುಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ, ನೆರೆಯ ಭೀಕರತೆಗೆ 1,895ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಸುಮಾರು 4.05 ಲಕ್ಷ ಹೆಕ್ಟರ್‌ ಪ್ರದೇಶ ವ್ಯಾಪ್ತಿಯಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. ಅನೇಕ ಹಳ್ಳಿಗಳಲ್ಲಿ ಈಗಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಕತ್ತಲೆಯ ರಾತ್ರಿಗಳನ್ನು ಕಳೆಯುವಂತಾಗಿದೆ.

95ಕ್ಕೂ ಗ್ರಾಮಗಳು ಜಲಾವೃತವಾಗಿಯೇ ಮುಂದುವರಿದಿದ್ದು, 168ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳಲ್ಲಿ ಇವರಿಗೆ ಆಶ್ರಯ ನೀಡಲಾಗಿದೆ. 185 ಕುಟುಂಬಗಳ 860ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

PREV
Read more Articles on

Recommended Stories

ಎಸ್ಸಿ ಎಂದೇಳಿ ಮದುವೆ ಬಹಿರಂಗಕ್ಕೆ ಒಪ್ಪದ ಪೇದೆಗೆ ಜಾಮೀನು ನಕಾರ
ಲಿವಿಂಗ್‌ ಟುಗೆದರ್‌ಗೆ ನಟಿಗೆ ಕಿರುಕುಳ : ಚಿತ್ರ ನಿರ್ಮಾಪಕ ಸೆರೆ