ಬಸವಕಲ್ಯಾಣ: ಮುಳ್ಳಿನ ನಡುವೆ ಗುಲಾಬಿ ಅರಳಿ ಸುಗಂಧ ಬೀರುವ ಹಾಗೆ ಕಷ್ಟಗಳ ನಡುವೆ ಬಾಳಿ ಬದುಕಬೇಕಾದರೆ ಮನುಷ್ಯನಿಗೆ ಆಧ್ಯಾತ್ಮ ಜ್ಞಾನ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನುಡಿದರು.
ಕೇಂದ್ರ ರಾಜ್ಯ ರೇಲ್ವೆ ಸಚಿವರಾದ ವಿ.ಸೋಮಣ್ಣ ಮಾತನಾಡಿ, ಸುಂದರವಾದ ಉಡುಗೆ ತೊಡುಗೆಗಳಿಂದ ವ್ಯಕ್ತಿತ್ವ ಬದಲಿಸಿಕೊಳ್ಳಬಹುದೇ ಹೊರತು ಬದುಕು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತಗೊಳ್ಳಲು ಸಾಧ್ಯ. ಹೃದಯವಂತಿಕೆ ಇಲ್ಲದೇ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯವಂತಿಕೆ ಬಹು ಮುಖ್ಯ. ರಂಭಾಪುರಿ ಜಗದ್ಗುರುಗಳ ಆದರ್ಶ ಗುರಿ ಮತ್ತು ಬೋಧನೆ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ವಿಶಿಷ್ಠವಾದದ್ದು, ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಮಾಹಿತಿಯನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಧರ್ಮದ ತಿಳುವಳಿಕೆಯನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕಾಗಿದೆ ಎಂದರು.ಪ್ರಖ್ಯಾತ ಸಾಹಿತ್ಯ ಸಂಶೋಧಕರಾದ ಡಾ.ಎ.ಸಿ.ವಾಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಡಸಾವಳಿ ಹಿರೇಮಠದ ಮತ್ತು ಉದ್ಗಿರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ‘ವೀರಶೈವ ತತ್ವ ಪ್ರಬೋದಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು, ಗೌಡಗಾಂವ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯರು, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಎಮ್.ಎಲ್.ಸಿ. ಶಶೀಲ ನಮೋಶಿ, ಶಾಸಕ ಡಾ.ಸಿದ್ಧಲಿಂಗ ಪಾಟೀಲ, ಮಾಜಿ ಸಂಸದ ಉಮೇಶ ಜಾಧವ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ್ ಕಲ್ಲೂರ ಅಲ್ಲದೇ ವಿವಿಧ ಮಠದ ಮಠಾಧೀಶರು. ಗಣ್ಯರು ಭಾಗವಹಿಸಿದರು.‘ಧರ್ಮಾಚರಣೆ ಇಲ್ಲದ ಮನುಷ್ಯನ
ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು’
ಸಾನ್ನಿಧ್ಯ ವಹಿಸಿದ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ ಎಂದರಲ್ಲದೆ, ಭೌತಿಕ ಜೀವನದ ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದಾಗಿದೆ ಎಂದರು. ಮನುಷ್ಯ ಭೂತ ಮತ್ತು ಭವಿಷ್ಯತ್ತಿನ ಬಗ್ಗೆ ಯೋಚಿಸುತ್ತಾನೆ. ಆದರೆ ವರ್ತಮಾನದ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೇ ಇವೆ. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು ಎಂದು ಕಿವಿಮಾತು ಹೇಳಿದರು.