ಕನ್ನಡಪ್ರಭ ವಾರ್ತೆ ರಾಯಚೂರು
ಇದೇ ಜ.29 ರಿಂದ 31ವರೆಗೆ ಎಡೆದೊರೆ ನಾಡಿನ ರಾಯಚೂರು ಉತ್ಸವನ್ನು ಏರ್ಪಡಿಸಲಾಗಿದ್ದು, ಅದಕ್ಕಾಗಿ ಯುದ್ಧೋಪಾದಿ ಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಅದರ ಭಾಗವಾಗಿಯೇ ರಾಯಚೂರು ನಗರದ ಸೌದರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದ ಬಟ್ಟಿಂಗ್, ಬ್ಯಾನರ್, ಪ್ರಮುಖ ರಸ್ತೆಗಳ ಅಕ್ಕ-ಪಕ್ಕದಲ್ಲಿ ಬೀಡಾ ಅಂಗಡಿ, ಡಬ್ಬಾಗಳ ತೆರವು ಕಾರ್ಯ ಕೈಗೊಂಡಿದ್ದರಿಂದ ರಸ್ತೆಗಳು ವಿಶಾಲವಾಗಿ ಕಾಣಲಾರಂಭಿಸಿವೆ.
ಸ್ಥಳೀಯ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಪುಟ್‌ಪಾತ್, ಅದೇ ರೀತಿ ಸ್ಟೇಷನ್ ರಸ್ತೆಯಲ್ಲಿ, ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಸಮೀಪದ ಅಕ್ಕ-ಪಕ್ಕದ ರಸ್ತೆ ಸೇರಿ ಅನೇಕ ಕಡೆ ರಸ್ತೆಗೆ ಅಡ್ಡಲಾಗಿದ್ದ ಬೀಡಾ-ಡಬ್ಬಾ ಅಂಗಡಿ ಗಳು ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಕ್ರಿಸ್ಮಸ್, ಹೊಸ ವರ್ಷದ ಆಚರಣೆ ಸೇರಿ ಖಾಸಗಿ ಕಾರ್ಯಕ್ರಮಗಳ ಕುರಿತು ನಗರದಾದ್ಯಂತ ರಾರಾಜಿಸುತ್ತಿದ್ದ ಬಟ್ಟಿಂಗ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಿರುವ ಪಾಲಿಕೆ ನಿಷೇಧದ ಆದೇಶವನ್ನು ಸಹ ಹೊರಡಿಸಿದೆ.ಇಷ್ಟೇ ಅಲ್ಲದೇ ಸುಂದರ ಸ್ವಚ್ಛತೆ ನಗರಕ್ಕಾಗಿ ಕೈಗೊಂಡಿರುವ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ. ಎಲ್ಲ ವಾರ್ಡ್, ಬಡಾವಣೆ, ರಸ್ತೆ,ವೃತ್ತಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಗಳು, ಇದರೊಟ್ಟಿಗೆ ಪ್ರಮುಖ ಸ್ಥಳಗಳಲ್ಲಿ ಸೌಂದರ್ಯೀಕರಣವು ಜೋರಾಗಿ ಸಾಗಿವೆ.
12ಕ್ಕೆ ಸ್ವಚ್ಛ ನಗರಕ್ಕಾಗಿ ಮ್ಯಾರಥಾನ್ ಓಟರಾಯಚೂರು: ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಾಗೂ ರಾಯಚೂರು ಉತ್ಸವದ ಮಾಹಿತಿ ಜನರಿಗೆ ತಲುಪಿಸುವ ಸಲುವಾಗಿ ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ ನಮ್ಮ ಸಂಕಲ್ಪ-ಸುಂದರ, ಹಸಿರು ನಗರ ಎಂಬ ಘೋಷವಾಕ್ಯ ದೊಂದಿಗೆ ಸ್ವಚ್ಛ ನಗರಕ್ಕಾಗಿ ಓಟ ಎಂಬ ಮ್ಯಾರಥಾನ್ ಕಾರ್ಯಕ್ರಮವನ್ನು ಜ.12ರಂದು ಆಯೋಜಿಸಲಾಗಿದೆ.
ನಗರ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಮ್ಯಾರಾಥಾನ್ ಓಟವು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಬಸವೇಶ್ವರ ವೃತ್ತ, ಜಿಲ್ಲಾಧಿಕಾರಿಗಳ ನಿವಾಸ, ಮಂತ್ರಾಲಯ ಕೆಫೆ, ಕೃಷಿ ವಿಶ್ವವಿದ್ಯಾಲಯ ಗೇಟ್-2ರ ಮಾರ್ಗವಾಗಿ ಸಂಚರಿಸಿ ಮತ್ತೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ.ಮ್ಯಾರಥಾನ್ ಓಟದ ಮೂಲಕ ಸ್ವಚ್ಛತೆಯಲ್ಲಿ ನಾಗರಿಕರ ಪಾತ್ರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯತೆ, ಪರಿಸರ ಕಾಳಜಿ, ನಗರ ಸೌಂದರ್ಯ ಹೆಚ್ಚಿಸುವುದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ. ಹಾಗೂ ಪಾಲ್ಗೊಂಡ ಅಭ್ಯರ್ಥಿಗಳಿಗೆ ಇ-ಸರ್ಟಿಫಿಕೇಟ್, ಪ್ರಥಮ ₹5000, ದ್ವಿತೀಯ ₹3500 ಮತ್ತು ತೃತೀಯ ₹2500 ಬಹುಮಾನ ನೀಡಲಾಗುವುದು.
ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ರೀಡಾಪಟುಗಳು ಸೇರಿದಂತೆ ಇಡೀ ನಗರದ ಜನತೆ ಈ ಮ್ಯಾರಥಾನ್ನಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು. ಮ್ಯಾರಥಾನ್ನಲ್ಲಿ ಭಾಗವಹಿಸಲು ಕ್ಯೂ.ಆರ್.ಕೋಡ್ ಸ್ಕ್ಯಾನ್ ಅಥವಾ ವೆಬ್ಸೈಟ್ ವಿಳಾಸ: https://forms. gle/oj58WfBkhCDCJAs17 ನಲ್ಲಿ ಮಾಡಿ ಇಂದೇ ನೋಂದಣಿ ಮಾಡಿಕೊಳ್ಳಬಹುದು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.