ಮೂಲದಲ್ಲಿಯೇ ಕಸ ವಿಂಗಡಿಸಿದರೆ ಪಟ್ಟಣ ಸ್ವಚ್ಛತೆ ಸಾಧ್ಯ: ಸಿ.ಜಾನಕಿ

KannadaprabhaNewsNetwork |  
Published : May 24, 2026, 02:30 AM IST
ಕಂಪ್ಲಿಯ 20ನೇ ವಾರ್ಡಿನಲ್ಲಿ ನಾಲ್ಕು ವಿಧದ ಕಸಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ಪುರಸಭೆ ಸಮುದಾಯ ಸಂಚಾಲಕಿ ಸಿ.ಜಾನಕಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಮನೆ ಮಟ್ಟದಲ್ಲಿಯೇ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ಪುರಸಭೆಯ ಕಸದ ವಾಹನಕ್ಕೆ ನೀಡಿದಲ್ಲಿ ಪಟ್ಟಣದ ಸ್ವಚ್ಛತೆ ಕಾಪಾಡಲು ಸಾಧ್ಯ.

ಕಂಪ್ಲಿ: ಪಟ್ಟಣದ 20ನೇ ವಾರ್ಡಿನಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮೂಲದಲ್ಲಿಯೇ ಕಸ ವಿಂಗಡಣೆ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಗುರುವಾರ ಜರುಗಿತು.

ಪುರಸಭೆ ಸಮುದಾಯ ಸಂಚಾಲಕಿ ಸಿ.ಜಾನಕಿ ಮಾತನಾಡಿ, ಮನೆ ಮಟ್ಟದಲ್ಲಿಯೇ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ಪುರಸಭೆಯ ಕಸದ ವಾಹನಕ್ಕೆ ನೀಡಿದಲ್ಲಿ ಪಟ್ಟಣದ ಸ್ವಚ್ಛತೆ ಕಾಪಾಡಲು ಸಾಧ್ಯ. ಪ್ರತಿ ನಾಗರಿಕರು ತಮ್ಮ ಮನೆಯಲ್ಲೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ತ್ಯಾಜ್ಯ ಎಂದು ಪ್ರತ್ಯೇಕವಾಗಿ ವಿಂಗಡಿಸಿ ನೀಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದಾದರೆ ಒಣ ಕಸವನ್ನು ಮರುಬಳಕೆ ಮಾಡಬಹುದಾಗಿದೆ ಎಂದರು.

ಸ್ಯಾನಿಟರಿ, ವಿಶೇಷ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ. ಮಿಶ್ರಿತ ಕಸ ನೀಡುವುದರಿಂದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಕಷ್ಟಕರವಾಗುತ್ತದೆ. ಕಸವನ್ನು ಮೂಲದಲ್ಲಿಯೇ ವಿಂಗಡಿಸುವ ಪದ್ಧತಿ ಜಾರಿಯಾದರೆ ಪೌರಕಾರ್ಮಿಕರ ಕೆಲಸ ಸುಲಭವಾಗುವುದರ ಜೊತೆಗೆ ಪಟ್ಟಣದ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣ ಕಾಪಾಡಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನಾಲ್ಕು ವಿಧದ ತ್ಯಾಜ್ಯಗಳ ಮಾದರಿಗಳನ್ನು ಪ್ರದರ್ಶಿಸಿ, ಯಾವ ತ್ಯಾಜ್ಯವನ್ನು ಯಾವ ವಿಭಾಗಕ್ಕೆ ಸೇರಿಸಬೇಕು ಎಂಬುದರ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಮನೆಗಳಲ್ಲಿ ಬಳಸುವ ಪ್ಲಾಸ್ಟಿಕ್, ಕಾಗದ, ಬಾಟಲಿ, ಆಹಾರ ಅವಶೇಷ, ಸ್ಯಾನಿಟರಿ ಪ್ಯಾಡ್, ಔಷಧ ತ್ಯಾಜ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಹೇಗೆ ಪ್ರತ್ಯೇಕಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್‌ ಬಾಬು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬರು ಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಸ್ವಚ್ಛ ಹಾಗೂ ಆರೋಗ್ಯಕರ ಪಟ್ಟಣ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.

ಸಮುದಾಯ ಸಂಚಾಲಕಿಯರಾದ ಗೌಡರ ನಾಗರತ್ನ, ತಿಮ್ಮಮ್ಮ, ಭೂಮಿಕ ಹಾಗೂ ವಾರ್ಡ್ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿವಿಯಲ್ಲಿ ಶರೀಫ ಶಿವಯೋಗಿ, ಗುರು ಗೋವಿಂದಭಟ್ಟರ ಅಧ್ಯಯನಪೀಠ ಭರವಸೆ
ಕಾರ್ಮಿಕರ ಹಕ್ಕು ಪಡೆಯಲು ಸಂಘಟನೆ ಅವಶ್ಯ: ಶಿವಲಿಂಗ ಟರ್ಕಿ