ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಹಾಜರಾತಿ ಪಡೆದ ಅಧ್ಯಕ್ಷ ಕೆ.ಶೇಷಾದ್ರಿಯವರು ಪೌರಾಯುಕ್ತ ಡಾ.ಜಯಣ್ಣ ಮತ್ತು ತಂಡದೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.
ಮೊದಲು ನಗರದ ಶ್ರೀರಾಮ ಚಿತ್ರಮಂದಿರ ಬಳಿ ತೆರಳಿದ ತಂಡ ಸ್ವಚ್ಛತೆ ಕಾರ್ಯ ವೀಕ್ಷಿಸಿದರು. ಅಲ್ಲಿಂದ ಎಂ.ಜಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಕೆಂಪೇಗೌಡ ಸರ್ಕಲ್, ರೈಲ್ವೆ ನಿಲ್ದಾಣದ ರಸ್ತೆ ಮುಖಾಂತರ ಯಾರಬ್ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ವೀಕ್ಷಣೆ ಮಾಡಿದರು.ಇದಾದ ಬಳಿಕ ರಾಮನಗರ ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಶೇಷಾದ್ರಿಯವರು, ರಾಮನಗರವನ್ನು ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಅದರಲ್ಲೂ ಸ್ವಚ್ಛತೆ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಶೀಘ್ರದಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗುವುದು. ಸ್ವಚ್ಛತೆ ವಿಚಾರದಲ್ಲಿ ನಗರಸಭೆಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು. ನಗರಸಭೆಯಲ್ಲಿ ಬೆಳಗ್ಗೆ 5.15ಕ್ಕೆ ಹಾಜರಾತಿ ಮೂಲಕ ಪೌರಕಾರ್ಮಿಕರ ಕೆಲಸ ಆರಂಭವಾಗಿ ಮೊದಲು ಮುಖ್ಯ ರಸ್ತೆ, ಪ್ರಮುಖ ವೃತ್ತಗಳ ಸ್ವಚ್ಛತೆ ಕಾರ್ಯದ ನಂತರ ವಾರ್ಡ್ ಗಳ ಸ್ವಚ್ಛತೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಕಸದ ಸಮಸ್ಯೆ ನಿವಾರಿಸುವ ಸಂಬಂಧ ಈಗಾಗಲೇ ನಗರದ 27 ಸ್ಥಳಗಳಲ್ಲಿ ಕಸ ಹಾಕದಂತೆ ಬ್ಲಾಕ್ ಸ್ಪಾಟ್ ಗಳನ್ನು ಗುರುತು ಮಾಡಿ, ಸಿಸಿ ಕ್ಯಾಮೆರಾ, ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಉಳಿದೆಡೆಯೂ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು, ಅಲ್ಲಿಯೂ ಶೀಘ್ರದಲ್ಲಿಯೇ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಿ ಮನೆಮನೆ ಕಸಸಂಗ್ರಹ ವಾರ್ಡಿಗೆ ಜನರು ಒಲವು ತೋರುತ್ತಿದ್ದಾರೆ ಎಂದು ಹೇಳಿದರು.
ನಗರದಲ್ಲಿ 1712 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಅದರ ಮೇಲೆಯೇ ಅವರೆಲ್ಲರ ಬದುಕು ಅವಲಂಬಿತವಾಗಿದೆ. ಅವರಿಂದ ಸಾರ್ವಜನಿಕರ ಓಡಾಟಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆಯೂ ಅರಿವಿದೆ. ಬೀದಿ ಬದಿ ವ್ಯಾಪಾರಿಗಳ ಸಹಕಾರ ಸಹ ಬೇಕಾಗುತ್ತದೆ. ಅವರಿಗೆ ಪರ್ಯಾಯ ವ್ಯವಸ್ಥೆ ಸೇರಿದಂತೆ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು. ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಅಕ್ಲೀಂ, ಗೋವಿಂದರಾಜು, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಮುಖಂಡ ಶಫಿ ಅಹಮದ್, ಪೌರ ಕಾರ್ಮಿಕರ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೊಲ್ಲಾಪುರಿ, ಶಾಖಾ ಅಧ್ಯಕ್ಷ ಮಾರಪ್ಪ ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.
- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.