ಮಡಿಕೇರಿ: ಹಿರಿಯರು ಸಂತಸದಿಂದ ಇರುವ ಮನೆ ಹಾಗೂ ಸಮಾಜ ಉತ್ತಮವಾಗಿರಲು ಸಾಧ್ಯ. ಆದ್ದರಿಂದ ಹಿರಿಯರನ್ನು ಗೌರವಿಸುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ತಿಳಿಸಿದರು.
ಮಡಿಕೇರಿ ಮಹಿಳಾ ಠಾಣೆಯ ಸಿಪಿಐ ಉಮೇಶ್ ಕುಮಾರ್ ಅವರು ಮಾತನಾಡಿ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಪೊಲೀಸ್ ನೆರವು ಪಡೆಯಬಹುದು ಎಂದು ತಿಳಿಸಿದರು.
ವಕೀಲ ಮೀನಾ ಕುಮಾರಿ ಮಾತನಾಡಿ ಕಾನೂನು ಅನುಷ್ಠಾನದಲ್ಲಿ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಮಾತನಾಡಿ, ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ನಿರ್ವಹಣೆ ಮಾಡುವುದು ಮಕ್ಕಳ ಕಾನೂನುಬದ್ಧ ಜವಾಬ್ದಾರಿ ಎಂದರು.ಪ್ರಕರಣಗಳ ಅಧ್ಯಯನ ಕುರಿತು ಮಾತನಾಡಿದ ವಕೀಲ ಮನೋಜ್ ಬೋಪಯ್ಯ, ಆಧುನಿಕ ಜೀವನಶೈಲಿಯಿಂದಾಗಿ ಇಂದಿನ ಜೆನ್‌ಝಿ ಯುವ ಪೀಳಿಗೆಯಲ್ಲಿ ಮಾನವೀಯ ಮೌಲ್ಯಗಳು ಹಾಗೂ ಬಾಂಧವ್ಯಗಳು ಕಡಿಮೆಯಾಗುತ್ತಿದ್ದು, ಇತರರ ತಪ್ಪುಗಳನ್ನು ಎತ್ತಿ ತೋರಿಸುವ ಮನೋಭಾವ ಹೆಚ್ಚಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಮಂಗಲಾ ಜಿ.ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಹಿರಿಯ ನಾಗರಿಕರಾದ ಸುನಂದ ಪ್ರಾರ್ಥಿಸಿದರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಸ್ವಾಗತಿಸಿದರು, ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿ, ವಂದಿಸಿದರು.