ತಾಲೂಕಿನ ಮುಖಂಡರ ಸಭೆ: ಕಾಮಗಾರಿ ಪುನರಾರಂಭಿಸದಿದ್ದರೆ ಹೋರಾಟಕ್ಕೆ ನಿರ್ಧಾರ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನನೆಗುದಿಗೆ ಬಿದ್ದಿರುವ ಹಿನ್ನೆಲೆ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ತಾಲೂಕಿನ ಮುಖಂಡರ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಹೋರಾಟದ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಹೆದ್ದಾರಿ ಗುತ್ತಿಗೆದಾರರ ವಿರುದ್ಧ ಸಾಕಷ್ಟು ಆಕ್ಷೇಪ ವ್ಯಕ್ತಗೊಂಡಿತು. ಐಆರ್‌ಬಿ ಗುತ್ತಿಗೆದಾರ ಕಂಪನಿಯ ನಿರ್ಲಕ್ಷ್ಯದಿಂದ ಕೆಲವೇ ದಿನಗಳ ಅಂತರದಲ್ಲಿ ಹಲವು ಹೆದ್ದಾರಿ ಅಪಘಾತಗಳಲ್ಲಿ ದುರ್ಮರಣ ನಡೆದಿರುವ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಪೂರ್ಣ ಕಾಮಗಾರಿಯಿಂದ ಅರ್ಧಕ್ಕೆ ನಿಂತಿರುವ ಹೆದ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಹೊಂಡ ತಪ್ಪಿಸುವ ಪ್ರಯತ್ನದಲ್ಲಿ ಭಾರೀ ವಾಹನಕ್ಕೆ ಸಿಲುಕಿ ಕೇವಲ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಗಳು ಪ್ರಾಣ ತ್ಯಜಿಸಿವೆ. ಈ ಅಪಘಾತ ಕೇವಲ ಆಕಸ್ಮಿಕವಲ್ಲ. ಬದಲಾಗಿ ಐಆರ್‌ಬಿ ಕಂಪನಿ ಉದ್ದೇಶ ಪೂರ್ವಕ ನಡೆಸಿರುವ ಸಾರ್ವಜನಿಕ ಹತ್ಯೆ ಎಂದು ಸಾರ್ವಜನಿಕರು ಆಕ್ಷೇಪಿಸಿದರು. ಈ ಹತ್ಯೆಗೆ ಯಾವ ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ. ಸಾರ್ವಜನಿಕರು ಹೋರಾಟದಿಂದ ಆಸಕ್ತಿ ಕಳೆದುಕೊಂಡಂತಾಗಿದೆ. ಸಾರ್ವಜನಿಕರು ಸಂಘಟಿತವಾಗಿ ಹೋರಾಟಕ್ಕೆ ಬೆಂಬಲವಾಗಿ ನಿಂತಾಗ ಇಂತಹ ದುರಂತಗಳನ್ನು ಎದುರಿಸಲು ಸಾಧ್ಯ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸತೀಶಕುಮಾರ ಹೇಳಿದರು.ಅಕ್ಟೋಬರ್ ಪ್ರಥಮ ವಾರದಿಂದಲೇ ಹೆದ್ದಾರಿ ಕಾಮಗಾರಿ ಪುನರಾರಂಭಗೊಳ್ಳುವುದೆಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ನೀಡಿದ್ದಷ್ಟೇ ಬಂತು. ಹೊರತಾಗಿ ಗುತ್ತಿಗೆದಾರ ಕಂಪನಿ ಈ ಹೇಳಿಕೆಗೆ ಯಾವುದೇ ಕಿಮ್ಮತ್ತು ನೀಡದಿರುವುದು ಕಾಮಗಾರಿಯ ನಿಯಂತ್ರಣ ರಾಜ್ಯ ಸರ್ಕಾರಕ್ಕೂ ಸಾಧ್ಯವಿಲ್ಲ ಎಂಬಂತಾಗಿದೆ. ಹೀಗಾದರೇ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೋರಾಟದ ಮಾರ್ಗ ಅನಿವಾರ್ಯ ಎಂದರು. ಹೆದ್ದಾರಿಯ ವಿಸ್ತರಣೆಯ ನೆಪದಲ್ಲಿ ಹೆದ್ದಾರಿ ಅಂಚಿನಲ್ಲಿದ್ದ ವಿದ್ಯುತ್ ಕಂಬಗಳನ್ನು ವಶಪಡಿಸಿಕೊಂಡಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಇಡೀ ಪಟ್ಟಣ ಕತ್ತಲಲ್ಲಿ ಮುಳುಗಿದೆ. ಮೂರು ವರ್ಷದಿಂದ ಕತ್ತಲ ಕೂಪದಲ್ಲಿ ಭಟ್ಕಳ ನಗರ ಕಾಲ ತಳ್ಳುತ್ತಿದೆ.
ಮಾಹಿತಿ ಹಕ್ಕಿನಲ್ಲಿ ಕೇಳಿದರೇ ಕೆಲವು ಖಾಸಗಿ ಸ್ವತ್ತುಗಳು ವಶವಾಗದೇ ನ್ಯಾಯಾಲಯದಲ್ಲಿದೆ ಎಂಬ ಸಬೂಬು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಪಷ್ಟನೆ ನೀಡುತ್ತಿದೆ. ಆದರೇ ಯಾವುದು ಎಂಬ ನಿಖರ ಮಾಹಿತಿ ನೀಡದೆ ಸರಕಾರವನ್ನು ಯಾಮಾರಿಸುತ್ತಿರುವಂತೆ ಭಾಸವಾಗುತ್ತಿದೆ. ಖಚಿತ ಮಾಹಿತಿಯಂತೆ ಕೇವಲ 1.125 ಕಿಮೀ ರಸ್ತೆ ಕಾಮಗಾರಿ ಬಾಕಿ ಇರುವ ಕುರಿತು ಮಾಹಿತಿ ನೀಡುತ್ತಿದೆ. ಈ ಸ್ಥಳ ಈಗಾಗಲೇ ಖುಲ್ಲಾ ಪಡಿಸಲಾಗಿದ್ದು ಎಲ್ಲಿಯೂ ಬಾಕಿ ಇರುವುದಿಲ್ಲ. ಆದಾಗ್ಯೂ ಇಲಾಖೆ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಎಮಾರಿಸಲು ಮುಂದಾಗಿರುವ ಹಿನ್ನೆಲೆ ಏನು.? ಎಂದು ಪ್ರಶ್ನಿಸಿದರು.ಹೆದ್ದಾರಿ ಕಾಮಗಾರಿ ವಿಳಂಬದಿಂದಾಗಿ ಆಗುವ ಪ್ರತಿ ಅನಾಹುತಕ್ಕೂ ಕಂಪನಿ ಕಾರಣವಾಗುವುದು. ಮಳೆಗಾಲದಲ್ಲಿ ಹೆದ್ದಾರಿ ಅಂಚಿನ ಗ್ರಾಮಗಳು ಜಲ ದಿಗ್ಭಂಧನವಾಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಲಾಗಿತ್ತು. ಮಳೆ ಮುಗಿಯುತ್ತಿರುವಂತೆ ಮತ್ತೆ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಿವುದಾಗಿ ಭರವಸೆ ನೀಡಿದ್ದ ಕಂಪನಿಯ ಅಧಿಕಾರಿಗಳಿಗೆ ಮಳೆ ಮುಗಿದರೂ ಎಚ್ಚರವಾಗದಿರುವುದನ್ನು ಸಭೆಯು ಒಕ್ಕೊರಲಿನಿಂದ ಖಂಡಿಸಿತು.
ಇನ್ನು ಎರಡು ಮೂರು ದಿನಗಳಲ್ಲಿ ಹೆದ್ದಾರಿ ಇಲಾಖೆಯ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ಕಾಮಗಾರಿಯ ಸ್ಥಗಿತಕ್ಕೆ ನಿಖರ ಕಾರಣಗಳನ್ನು ತಿಳಿದು ಕೊಂಡು ಮತ್ತೆ ಸಭೆ ಸೇರಿ ಮುಂದಿನ ನಿರ್ಣಯ ಕೈಗೊಳ್ಳಲು, ಅಗತ್ಯವಿದ್ದರೇ ಸಾರ್ವಜನಿಕ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ತಂಜೀಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ನಾಗರಿಕ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಇಮ್ರಾನ ಲಂಖಾ, ತಂಜೀಂ ಪ್ರಧಾನ ಕಾರ್ಯದರ್ಶಿ ಮಹಮ್ಮದ ರಖೀಬ, ಎಸ್.ಎಂ. ಪರ್ವೇಜ, ಪುರಸಭಾ ಸದಸ್ಯ ನಾಗರಾಜ ನಾಯ್ಕ, ಸುಬೋಧ ಆಚಾರಿ, ಗಣಪತಿ ನಾಯ್ಕ ಜಾಲಿ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಮಜೀದ ಗುಳ್ಮಿ, ವೆಂಕ್ಟಯ್ಯ ಬೈರುಮನೆ, ಲಕ್ಷ್ಮಣ ಕೋಟದಮಕ್ಕಿ, ಗೊಂಡ ಸಮಾಜದ ಮುಖಂಡ ನಾರಾಯಣ ಗೊಂಡ, ಮಾರುಕೇರಿ ಪಂಚಾಯಿತಿ ಉಪಾಧ್ಯಕ್ಷ ಎಂಡಿನಾಯ್ಕ, ಗಣಪತಿ ಜಾಲಿ, ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕಆಸರಕೇರಿ, ಅಬ್ದುಲ ಮುನೀರ್, ಹಬೀಬ ಮೋತೆಶ್ಯಾಮ, ಹೆದ್ದಾರಿ ಹೋರಾಟ ಸಮಿತಿಯ ಮುಖಂಡ ಜೈಲಾನಿ ಶಾಬಂದ್ರಿ, ಎಸ್.ಎಂ. ನಾಯ್ಕ, ಜಾಲಿ ಪಪಂ ಸದಸ್ಯ ಮಿಸ್ಬಾಉಲ್ ಮುಂತಾದವರಿದ್ದರು.