ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು: ರಾಜು

KannadaprabhaNewsNetwork | Published : Nov 30, 2024 12:50 AM

ಸಾರಾಂಶ

ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸುಸಜ್ಜಿತ ಬಡಾವಣೆ ನಿರ್ಮಿಸಿಕೊಡುವಲ್ಲಿ ಆಡಳಿತ ವಿಫಲವಾಗಿದೆ. ನಗರೋತ್ಥಾನ ಯೋಜನೆಯಡಿ 96 ಲಕ್ಷ ರು. ಗಳನ್ನು ನಿವೇಶನ ಖರೀದಿಗೆ ಮೀಸಲಿಟ್ಟರೂ ಇಂದಿಗೂ ಸದುಪಯೋಗವಾಗಿಲ್ಲ. ಪೌರಕಾರ್ಮಿಕ ವಿದ್ಯಾರ್ಥಿಗಳಿಗೆ ನಮಸ್ತೆ ಆಪ್ ಮೂಲಕ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು.

ಕನ್ನಡಪ್ರಭ ವಾರ್ತೆ ಹುಣಸೂರು

ನೇರ ಪಾವತಿ ನೇಮಕಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಶೀಘ್ರ ರಚಿಸಿ ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಉಸ್ತುವಾರಿ ರಾಜ್ಯ ಸದಸ್ಯ ಡಿ.ಆರ್. ರಾಜು ಒತ್ತಾಯಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪಟ್ಟಣ ವ್ಯಾಪ್ತಿಯ ಸಫಾಯಿ ಕರ್ಮಚಾರಿ (ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಸ್‌) ಗಳ ಮರುಸಮೀಕ್ಷಾ ಸಭೆ ಮತ್ತು ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ನೇರ ನೇಮಕಾತಿಯಡಿ ನೇಮಕಗೊಂಡವರು ಸರ್ಕಾರ ಸೌಲಭ್ಯಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನೇರ ಪಾವತಿಯಡಿ ಪೌರಕಾರ್ಮಿಕರ ಶೋಷಣೆ ಇನ್ನೂ ಮುಂದುವರಿದಿದೆ. ಇಂದಿನ ಕಾಲಘಟ್ಟದಲ್ಲಿ ಇದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸುಸಜ್ಜಿತ ಬಡಾವಣೆ ನಿರ್ಮಿಸಿಕೊಡುವಲ್ಲಿ ಆಡಳಿತ ವಿಫಲವಾಗಿದೆ. ನಗರೋತ್ಥಾನ ಯೋಜನೆಯಡಿ 96 ಲಕ್ಷ ರು. ಗಳನ್ನು ನಿವೇಶನ ಖರೀದಿಗೆ ಮೀಸಲಿಟ್ಟರೂ ಇಂದಿಗೂ ಸದುಪಯೋಗವಾಗಿಲ್ಲ. ಪೌರಕಾರ್ಮಿಕ ವಿದ್ಯಾರ್ಥಿಗಳಿಗೆ ನಮಸ್ತೆ ಆಪ್ ಮೂಲಕ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು. ಪೌರ ಕಾರ್ಮಿಕರಿಗೆ ಪ್ರತ್ಯೇಕ ಸ್ಮಶಾನ ನೀಡಲು ಸಾಧ್ಯವಾಗದಿದ್ದರೆ ಈಗಿರುವ ಸ್ಮಶಾನದಲ್ಲಿ ಪ್ರತ್ಯೇಕ ಜಾಗ ಗುರುತಿಸಿ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆಸಲಿ. ಸಫಾಯಿ ಕರ್ಮಚಾರಿಗಳ ಮರುಸಮೀಕ್ಷೆ ಅಗತ್ಯವಾಗಿದ್ದು, ತಾಲೂಕಿನಲ್ಲೂ ಸಮೀಕ್ಷಾ ಕಾರ್ಯ ಮುಂದುವರೆದಿದೆ ಎಂದರು.

ಹಿರಿಯ ಮುಖಂಡ ಕೆ. ನಂಜಪ್ಪ ಬಸವನಗುಡಿ ಮಾತನಾಡಿದರು.

ಪೌರಾಯುಕ್ತೆ ಕೆ. ಮಾನಸ ಮಾತನಾಡಿ, ಪಟ್ಟಣದಲ್ಲಿ ಪೌರಕಾರ್ಮಿಕರ ಬಡಾವಣೆ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸುವ ಕಾರ್ಯ ಆಗಬೇಕಿದೆ. ನಿಮಗೆ ಯಾವುದಾದರೂ ನಿವೇಶನ ತಿಳಿದರೆ ನಗರಸಭೆಗೆ ಮಾಹಿತಿ ನೀಡಿದರೆ ನಿವೇಶನ ಖರೀದಿಸುವ ಕಾರ್ಯ ಮಾಡುತ್ತೇನೆ. ಕರ್ತವ್ಯದ ವೇಳೆ ಮೃತಪಟ್ಟ ನಾಲ್ವರು ಪೌರಕಾರ್ಮಿಕರಿಗೆ ನಗರಸಭೆಯ ಸಾಮಾನ್ಯ ನಿಧಿಯಿಂದ ತಲಾ 50 ಸಾವಿರ ರು. ಪರಿಹಾರ ನೀಡಲು ಕ್ರಮವಹಿಸಲಾಗುವುದು. ಮರು ಸಮೀಕ್ಷಾ ಕಾರ್ಯದಲ್ಲಿ ನಗರವ್ಯಾಪ್ತಿಯಲ್ಲಿ 167 ಅರ್ಜಿಗಳು ಸಲ್ಲಿಸಲಾಗಿದ್ದು, ಪರಿಶೀಲನೆ ನಂತರ ದೃಢಪಡಿಸಲಾಗುವುದು ಎಂದರು.

ಉಪವಿಭಾಗ ಮಟ್ಟದ ಮ್ಯಾನುಯೆಲ್ ಸ್ಕ್ಯಾವೆಂಜರ್ಸ್‌ ಜಾಗೃತಿ ಸಮಿತಿ ಸದಸ್ಯ ಕೆ. ಲಕ್ಷ್ಮಣ್, ಮುಖಂಡ ಪೆರುಮಾಳ್ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗೆಳ ಕುರಿತು ಮಾಹಿತಿ ಒದಗಿಸಿದರು. ಸಭೆಯಲ್ಲಿ ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್, ನಗರಸಭಾ ಸದಸ್ಯೆ ರಾಣಿ ಪೆರುಮಾಳ್, ನಗರಸಭೆ ಪರಿಸರ ಎಂಜಿನಿಯರ್ ಸೌಮ್ಯ, ಪೌರಕಾರ್ಮಿಕರು ಇದ್ದರು.

Share this article