ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುತ್ತಾರೆಯೋ ಇಲ್ಲವೋ ಗೊತ್ತಿಲ್ಲ : ಬಿ. ಆರ್‌. ಪಾಟೀಲ

KannadaprabhaNewsNetwork |  
Published : Nov 30, 2024, 12:50 AM ISTUpdated : Nov 30, 2024, 12:43 PM IST
ಬಿ.ಆರ್‌. ಪಾಟೀಲ | Kannada Prabha

ಸಾರಾಂಶ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೋ? ಬೇಡವೋ ಎಂಬ ನಿರ್ಧಾರವು ಹೈಕಮಾಂಡ್‌ಗೆ ಬಿಟ್ಟಿರುವ ವಿಷಯ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.

ಹುಬ್ಬಳ್ಳಿ: ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಆಗಾಗ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಪೂರ್ಣಾವಧಿಯ 5 ವರ್ಷ ಅಧಿಕಾರದಲ್ಲಿ ಇರುತ್ತಾರೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೋ? ಬೇಡವೋ ಎಂಬ ನಿರ್ಧಾರವು ಹೈಕಮಾಂಡ್‌ಗೆ ಬಿಟ್ಟಿರುವ ವಿಷಯ. ಆದರೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದರು.

ಅವರ ಬದಲಾವಣೆಯ ನಿರ್ಧಾರ ತೆಗೆದುಕೊಂಡರೆ ಯಾರೇನು ಮಾಡಲು ಸಾಧ್ಯವಿಲ್ಲ? ನಂತರ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲೂಬಹುದು. ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬೇಕೆಂದು ಯಾವುದೇ ಸಚಿವರ, ಶಾಸಕರ ಮನಸ್ಸಿನಲ್ಲಿಲ್ಲ. ಯಾವುದೇ ರೀತಿಯ ಚರ್ಚೆಗಳೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಟ್ಟ ಹೆಸರು ತರಲು ಯತ್ನ

ವಕ್ಫ್ ಆಸ್ತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ, ಬಿಜೆಪಿ ಅಧಿಕಾರದಲ್ಲಿದ್ದ ವೇಳೆಯೂ ರೈತರಿಗೆ ನೋಟಿಸ್ ನೀಡಿತ್ತು. ಅದರ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದರು

ಬಿಜೆಪಿಯಲ್ಲೇ ಬಣ ಸೃಷ್ಟಿಯಾಗಿವೆ

ಬಿಜೆಪಿ ನಾಯಕರೆಲ್ಲ ಒಂದಾಗಿ ವಕ್ಫ್ ಬೋರ್ಡ್ ವಿರುದ್ಧ ಜನಜಾಗೃತಿ ಮಾಡಲಿ. ಆದರೆ, ಅವರಲ್ಲಿಯೇ ಒಡಕುಂಟಾಗಿದೆ. ಹಲವು ಬಣಗಳು ಸೃಷ್ಟಿಯಾಗಿವೆ. ಬಿಜೆಪಿಯ ಕೆಲ ನಾಯಕರು ದೆಹಲಿಯಲ್ಲಿ ಕುಳಿತು ನಿರ್ವಹಣೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮಾಜಿ ಪ್ರಧಾನಿ ಎಲ್‌.ಕೆ. ಅಡ್ವಾಣಿ, ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಲಾಗಿತ್ತು. ಇವರಿಗೆ ಇನ್ನು ಉಳಿದವರು ಯಾವ ಲೆಕ್ಕ ಎಂದು ಕುಟುಕಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ಆರೋಪ ಮುಕ್ತವಾಗಿ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ

ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿದೆ. ಇದರಿಂದ ರಾಜಕೀಯ ಲಾಭವೂ ಆಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಈ ಯೋಜನೆಗಳಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯಾಗದಂತೆ ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ

ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಧೈರ್ಯವಿದ್ದರೆ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ರಾಜ್ಯದ ಪಾಲು ಕೊಡಿಸಲಿ ಎಂದು ಹರಿಹಾಯ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''