ಬೈರಮಂಗಲದಲ್ಲಿ ರೈತರ ಪರ-ವಿರೋಧ ಘರ್ಷಣೆ

KannadaprabhaNewsNetwork |  
Published : Jul 12, 2026, 02:15 AM IST
5.ಬಿಡದಿಯ ಭೈರಮಂಗಲದಲ್ಲಿ   ಪೊಲೀಸರು ಸರ್ವಗಾವಲಿನಲ್ಲಿ ರೈತರು ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಒಂದೆಡೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 486ನೇ ದಿನಕ್ಕೆ ಕಾಲಿಟ್ಟಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರೂ ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಪರ-ವಿರೋಧ ರೈತರು ಬೈರಮಂಗಲ ಗ್ರಾಮದಲ್ಲಿ ಶನಿವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಘರ್ಷಣೆ ಉಂಟಾಗಿ ವಾಗ್ವಾದ ನಡೆಯಿತು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಒಂದೆಡೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 486ನೇ ದಿನಕ್ಕೆ ಕಾಲಿಟ್ಟಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರೂ ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಪರ-ವಿರೋಧ ರೈತರು ಬೈರಮಂಗಲ ಗ್ರಾಮದಲ್ಲಿ ಶನಿವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಘರ್ಷಣೆ ಉಂಟಾಗಿ ವಾಗ್ವಾದ ನಡೆಯಿತು.

ಟೌನ್ ಶಿಪ್ ಯೋಜನೆ ಭೂಸ್ವಾಧೀನದ ಪರ ಮತ್ತು ವಿರೋಧದ ಚಳುವಳಿ ದಿನೇ ದಿನೇ ತಾರಕ್ಕಕ್ಕೇರುತ್ತಿದೆ. ಭೈರಮಂಗಲ ಗ್ರಾಮದಲ್ಲಿ ಕೂಗಳತೆ ದೂರದಲ್ಲಿಯೇ ನಡೆಯುತ್ತಿರುವ ಎರಡು ಬಣಗಳ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದರು. ರೈತರ ಎರಡೂ ಗುಂಪುಗಳು ಹೋರಾಟವನ್ನು ತೀವ್ರಗೊಳಿಸಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಸನ್ನಿವೇಶ ಸೃಷ್ಟಿಯಾಗಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಲು ರಾಜ್ಯದ ಸುಮಾರು 15 ಜಿಲ್ಲೆಗಳಿಂದ ಸಂಯುಕ್ತ ನಾಯಕತ್ವದ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭೈರಮಂಗಲಕ್ಕೆ ಆಗಮಿಸಿದ್ದರು. ಹತ್ತಕ್ಕೂ ಹೆಚ್ಚು ಬಸ್ ಗಳು ಹಾಗೂ ಕಾರುಗಳ ಮೂಲಕ ಬಂದಿಳಿದ ರೈತಸಂಘದ ಮುಖಂಡರು ಧರಣಿ ಸ್ಥಳಕ್ಕೆ ಸುಮಾರು 500 ಮೀಟರ್ ದೂರದಿಂದ ಪಾದಯಾತ್ರೆ ಪ್ರಾರಂಭಿಸಿದರು.

ಮತ್ತೊಂದೆಡೆ ಬೈರಮಂಗಲ ಶಾಲೆ ಬಳಿ ಧರಣಿ ನಡೆಸುತ್ತಿದ್ದ ಯೋಜನೆ ಪರವಾಗಿರುವ ರೈತರು, ಬೇರೆ ಜಿಲ್ಲೆಗಳಿಂದ ಬಂದ ರೈತ ಹೋರಾಟಗಾರರನ್ನು ತರಾಟೆ ತೆಗೆದುಕೊಂಡರು. ರೈತಮುಖಂಡರನ್ನು ತಡೆದ ಪ್ರತಿಭಟನಾಕಾರರು ಸ್ಥಳೀಯ ಸಮಸ್ಯೆ ಹಾಗೂ ವಾಸ್ತವಾಂಶಗಳನ್ನು ಅರಿಯದ ನೀವು ರಾಜ್ಯದ ಜನರಿಗೆ ತಪ್ಪು ಸಂದೇಶ ಕಳುಹಿಸುತ್ತಿದ್ದೀರಿ, ಇಲ್ಲಿನ ಕೆಲವು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ, ನೀವೆಲ್ಲರೂ ಪೇಮೆಂಟ್ ಗಿರಾಕಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಗೆ ಭೂಮಿ ಕೊಡುವುದು ಬಿಡುವುದು ಈ ಭಾಗದ ರೈತರ ವಿವೇಚನೆಗೆ ಬಿಟ್ಟಿದ್ದು, ಆದರೆ, ನೀವು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದೀರಿ, ಬನ್ನಿ ನಮ್ಮೊಂದಿಗೆ ಚರ್ಚೆ ನಡೆಸಿ ನಾವು ಅನುಭವಿಸುತ್ತಿರುವ ನೋವುಗಳನ್ನು ಆಲಿಸಿ ಎಂದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಮ್ಮ ಊರಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನೀವು ವಾಪಸ್ ಹೋಗಿ ಎಂದು ಧಿಕ್ಕಾರ ಕೂಗಿದರು.

ಈ ವೇಳೆ ಪರ ವಿರೋಧದ ರೈತರಿಂದ ಪ್ರತಿರೋಧ ತೀವ್ರವಾಗಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಯೋಜನೆ ವಿರುದ್ಧದ ರೈತರು ನೀವೆಲ್ಲಾ ಸಿಎಂ ಡಿ.ಕೆ.ಶಿವಕುಮಾರ್ ಚೇಲಾಗಳಾ? ನೀವು ಜಮೀನು ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ ಆದರೆ ಪ್ರತಿಭಟನೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.ರೈತರು

ಪರ ವಿರುದ್ಧದ ಧಿಕ್ಕಾರದ ಜತೆಗೆ ಪರಸ್ಪರ ನಿಂದನೆಯನ್ನೂ ಮಾಡಿಕೊಂಡರು.

ಉಭಯ ಬಣಗಳ ನಡುವೆ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಕಡೆಯವರನ್ನು ಸಮಾಧಾನಪಡಿಸಿ ಘರ್ಷಣೆಯನ್ನು ತಪ್ಪಿಸಿದರು.

ಕೂಗಾಡುತ್ತಿದ್ದ ರೈತರನ್ನು ನಿಯಂತ್ರಿಸಿ ಪರವಿರುವ ರೈತರನ್ನು ಸುತ್ತುವರೆದ ಪೊಲೀಸರು , ಹೊರ ಜಿಲ್ಲೆಗಳ ರೈತರ ಮೆರವಣಿಗೆ ಮುಂದುವರೆಯಲು ಅವಕಾಶ ಕಲ್ಪಿಸಿದರು. ಹೋರಾಟಗಾರರನ್ನು ನಿಯಂತ್ರಿಸುವುದು ಅಧಿಕ ಪ್ರಮಾಣದಲ್ಲಿ ನಿಯೋಜನೆಗೊಂಡಿದ್ದ ಪೋಲೀಸರಿಗೆ ದೊಡ್ಡ ಸವಾಲಾಗಿತ್ತು.

ಇನ್ನೂ ಯೋಜನೆ ಪರವಾಗಿರುವ ರೈತರ ವಿರೋದಧ ನಡುವೆಯೂ ಬೈರಮಂಗಲ ವೃತ್ತದಲ್ಲಿ ಯೋಜನೆ ವಿರೋಧಿಸಿ ರೈತರು ಬೃಹತ್ ರೈತ ಸಮಾವೇಶ ನಡೆಸಿದರು. ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರಾದ ರೈತ ಚುಕ್ಕಿ ನಂಜುಂಡಸ್ವಾಮಿ, ಹೊನ್ನೂರು ಪ್ರಕಾಶ್, ಕೆ.ಟಿ.ಗಂಗಾಧರ್ ಅನೇಕರು ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರು ಹೊರ ಜಿಲ್ಲೆಗಳಿಂದ ಬಂದರ ರೈತರ ವಿರುದ್ಧ ಕಿಡಿಕಾರಿದರು.

ಬಾಕ್ಸ್ ...............

ಜಿಲ್ಲಾಡಳಿತ ಮೌನವಾಗಿರುವುದು ಏಕೆ?

ಭೈರಮಂಗಲ ಗ್ರಾಮದಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ರೈತರು ಎರಡು ಗುಂಪುಗಳಲ್ಲಿ ಪರ ವಿರೋಧದ ಪ್ರತಿಭಟನೆ ನಡೆಸುತ್ತಿದ್ದು ಧ್ವನಿವರ್ಧಕಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಏರುದನಿಯಲ್ಲಿ ಮಂಡಿಸುತ್ತಿರುವುದು ಕೇಳಿ ಬಂದಿತು. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಬೈರಮಂಗಲದಲ್ಲಿ ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಘರ್ಷದ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಇಷ್ಟಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಕೆಲವು ಹಿರಿಯ ಗ್ರಾಮಸ್ಥರಿಂದ ಕೇಳಿಬರುತ್ತಿದೆ.

11ಕೆಆರ್ ಎಂಎನ್ 5,6.ಜೆಪಿಜಿ

5.ಬಿಡದಿಯ ಭೈರಮಂಗಲದಲ್ಲಿ ಪೊಲೀಸರು ಸರ್ವಗಾವಲಿನಲ್ಲಿ ರೈತರು ಮೆರವಣಿಗೆ ನಡೆಸಿದರು.

6.ಹೊರ ಜಿಲ್ಲೆಗಳ ರೈತರಿದ್ದ ಬಸ್‌ ಅನ್ನು ರೈತರು ತಡೆಯುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ: ಜಿವಿಪಿಗಳು ಹೈರಾಣು
ಬಣಜಿಗ ಸಮಾಜಕ್ಕೆ ಅವಹೇಳನ ಆರೋಪ: ಪ್ರಕರಣ ದಾಖಲು