ರಾಮನಗರ: ಈ ಪವಿತ್ರವಾದ ಹಸಿರು ಶಾಲು ಬಟ್ಟೆ ತುಂಡಲ್ಲ, ಇದು ರೈತರ ಸಂಕೇತ. ಹುತಾತ್ಮ ರೈತರ ರಕ್ತದಲ್ಲಿ ಹೆಣೆದಿರುವ ಶಾಲು. ರೈತರ ಹೋರಾಟದ ವೇದಿಕೆಯಲ್ಲಿ ಭ್ರಷ್ಟ ರಾಜಕಾರಣಿಗಳಿಗೆ ಅವಕಾಶ ನೀಡಿ, ಹೂವಿನ ಹಾರದಂತೆ ಹಸಿರು ಶಾಲು ಹಾಕಿ ಹುತಾತ್ಮ ರೈತರನ್ನು ಅವಮಾನಿಸಬೇಡಿ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೋರಾಟ ನಿರತ ರೈತರನ್ನು ಎಚ್ಚರಿಸಿದರು.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಮೂರು ರಾಜಕೀಯ ಪಕ್ಷಗಳು ಯಾವ ರೀತಿ ನಡೆದುಕೊಂಡಿವೆ ಎಂಬ ಸತ್ಯ ಗೊತ್ತಿದೆ. ಆ ರಾಜಕೀಯ ಪಕ್ಷಗಳಿಗೆ ಅವರದೇ ಆದ ಶಾಲುಗಳಿವೆ. ಆದರೂ ಅವರಿಗೆಲ್ಲ ಪವಿತ್ರವಾದ ಹಸಿರು ಶಾಲೇ ಏಕೆ ಬೇಕು. ನಿಮಗೆಲ್ಲ ಕೈ ಮುಗಿದು ಕೇಳಿಕೊಳ್ಳುತ್ತೇನೆ ಹಸಿರು ಶಾಲನ್ನು ಭ್ರಷ್ಟ ರಾಜಕಾರಣಿಗಳಿಗೆ ಹಾಕಿ ಮೈಲಿಗೆ ಮಾಡಬೇಡಿ ಎಂದು ಮನವಿ ಮಾಡಿದರು.
ಹಸಿರು ಶಾಲು ನಿಮ್ಮ ಹೋರಾಟಕ್ಕೆ ಶಕ್ತಿ ತಂದಿದೆ. ಈ ಹೋರಾಟದ ಆರಂಭಕ್ಕೂ ಮುನ್ನ ನಿಮ್ಮ ಹೆಗಲ ಮೇಲೆ ಹಸಿರು ಶಾಲು ಇರಲಿಲ್ಲ. ಸರ್ಕಾರ ಭೂಮಿಗೆ ಕೈ ಹಾಕಿದ ಮೇಲೆ ನಿಮಗೆಲ್ಲ ಹಸಿರು ಶಾಲಿನ ಶಕ್ತಿ ಏನೆಂದು ಗೊತ್ತಾಗಿದೆ. ಯಾರಿಗೂ ಇಲ್ಲದಿರುವ ಶಕ್ತಿ ಹಸಿರು ಶಾಲಿಗಿದೆ. ನಿಮ್ಮ ಭೂಮಿಯನ್ನು ಯಾವ ಪಹಣಿ, ಪಟ್ಟಾ ಕಾಯುತ್ತಿಲ್ಲ. ನಿಮ್ಮ ಭೂಮಿಯನ್ನು ಹಸಿರು ಶಾಲು ಕಾಯುತ್ತಿದೆ ಎಂದು ಹೇಳಿದರು.ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆದ ಹೋರಾಟದಲ್ಲಿ ಸ್ಪಷ್ಟತೆ ಇತ್ತು. ಈ ಚಳವಳಿಯಲ್ಲಿಯೂ ಆ ಸ್ಪಷ್ಟತೆ ಬರಬೇಕು. ರೈತರು ಪ್ರಾಮಾಣಿಕವಾಗಿ ಹೋರಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ನಿಮ್ಮಲ್ಲಿರುವ ಶಕ್ತಿಯನ್ನು ನೀವು ಅರಿತುಕೊಳ್ಳಬೇಕು. ನಿಮ್ಮಲ್ಲಿನ ಒಗ್ಗಟ್ಟು, ಸಂಘಟನೆ, ಹೋರಾಟವೇ ಇಷ್ಟೊಂದು ಜನರ ಬೆಂಬಲ ಸಿಗಲು ಕಾರಣ ಎಂದು ತಿಳಿಸಿದರು.
ಒಂದೆಡೆ ರೈತರಿಗೆ ಸಾಲದ ಹೊರೆಯನ್ನು ಹೆಚ್ಚಿಸಿ, ಇನ್ನೊಂದೆಡೆ ರೈತರ ಬೆಳೆಗಳಿಗೆ ಮಾರುಕಟ್ಟೆಯೇ ಇಲ್ಲದಂತೆ ಮಾಡುತ್ತಿದ್ದಾರೆ. ರೈತರು ವ್ಯವಸಾಯವೇ ಸಾಕು ಎನ್ನುವಂತಹ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಗದೊಂದೆಡೆ ಭೂಸ್ವಾಧೀನಕ್ಕೆ ಮುಂದಾಗಿ ರೈತನ ಬುಡಕ್ಕೆ ಕೈಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಡಿಕೆಶಿಯ ಭೂ ದಾಹದ ಮದ ಅಡಗಿಸ್ತೇವೆ:
ವಿದೇಶಿಗಳಿಗೆ ಭೂಮಿ ಕೊಡಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಮಚಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರು ಬೆಳೆಯಲ್ಲಿನ ಕಳೆ ಇದ್ದಂತೆ. ರೈತರಿಗೆ ಅದನ್ನು ಕಿತ್ತಾಕುವುದು ಗೊತ್ತು, ಗೊಬ್ಬರ ಮಾಡುವುದು ಗೊತ್ತು. ರೈತರನ್ನು ಕೆಣಕಿದ ಯಾವ ಸರ್ಕಾರಗಳು ಉಳಿದಿರುವ ಉದಾಹರಣೆಯೇ ಇಲ್ಲ. ನಿಮಗೆಲ್ಲ ಬಡ್ಡಿ ಸಮೇತ ಉತ್ತರ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಮುಖಂಡರಾದ ಮಂಜು ಕಿರಣ್ , ಅನುಸೂಯಮ್ಮ, ಪ್ರಕಾಶ್ ರಾಮನಾಯಕನಹಳ್ಳಿ, ಮೂರ್ತಿ, ಲಿಂಗರಾಜು, ಪ್ರಕಾಶ್ ನಾಯ್ಕ, ಯಶವಂತ್ ಗೋರ್ಪಡೆ, ಸುನೀಲ್, ಸುರೇಶ್ , ಮಂಜುನಾಥ್ , ರಾಜಣ್ಣ, ಎಂ.ಆರ್.ಲಕ್ಷ್ಮಿ ನಾರಾಯಣ್, ಮುನಿ ವೆಂಕಟಮ್ಮ ಮತ್ತಿತರರು ಉಪಸ್ಥಿತರಿದ್ದರು.ಕೋಟ್ ...................
-ಚುಕ್ಕಿ ನಂಜುಂಡಸ್ವಾಮಿ, ರೈತ ನಾಯಕಿ
ರಾಜ್ಯಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ 9500 ಎಕರೆ ಭೂಮಿ ಕಸಿದುಕೊಳ್ಳುತ್ತಿರುವುದಕ್ಕೆ ಎಲ್ಲ ರೈತರ ವಿರೋಧ ಇದೆ. ಆದರೆ, ದೂರದ ಊರುಗಳಿಂದ ರೈತರು ಬಂದು ಹೋರಾಟ ಮಾಡಲು ಸಾಧ್ಯವಿಲ್ಲ.ಆದ್ದರಿಂದ ರೈತರು ಎಲ್ಲಿ ಹಕ್ಕು ಚಲಾಯಿಸುತಾತವೊ ಅಲ್ಲಿ ಹೋರಾಟ ಮಾಡಬೇಕು. ಜಮೀನಿನಲ್ಲಿ ಕಪ್ಪು ಬಾವುಟ ನೆಟ್ಟು ಕೃಷಿ ಮಾಡಿ, ಮನೆಗಳ ಮೇಲೆ ಹಸಿರು ಬಾವುಟ ಹಾರಿಸುವ ಮೂಲಕ ಪ್ರತಿರೋಧ ತೋರಿ.
- ಹನೂರು ಪ್ರಕಾಶ್ ,ರೈತ ನಾಯಕರು, ಚಾಮರಾಜನಗರ11ಕೆಆರ್ ಎಂಎನ್ 3.ಜೆಪಿಜಿರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು.