ಹಿರೇಕೆರೂರು ತಾಲೂಕಿನ ಬುರಡಿಕಟ್ಟಿ ಗ್ರಾಮದ ಶುದ್ಧ ನೀರಿನ ಘಟಕ ದುರಸ್ತಿ ಇರುವುದರಿಂದ ನೀರು ಸರಬರಾಜು ಇಲ್ಲದೇ ಸ್ಥಗಿತಗೊಂಡಿದೆ.
ರವಿ ಮೇಗಳಮನಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಗ್ರಾಮದ ಶುದ್ಧನೀರಿನ ಘಟಕ ಸ್ಥಗಿತಗೊಂಡು 3 ವರ್ಷಗಳಿಂದ ನೀರಿಗಾಗಿ ಗ್ರಾಮಸ್ಥರು ಪರಿತಪಿಸುವಂತಾಗಿದೆ.
ತಾಲೂಕಿನ ಬುರಡಿಕಟ್ಟಿ ಗ್ರಾಮದ ಶುದ್ಧ ನೀರಿನ ಯಂತ್ರ ಕೆಟ್ಟಿದ್ದು, ಕೊಳವೆಬಾವಿಗಳಲ್ಲಿ ಸವಳು ನೀರು ಇದೆ ಎಂಬ ಕಾರಣ ಅವುಗಳ ರಿಪೇರಿಗೂ ಮುಂದಾಗಿಲ್ಲ. ಶುದ್ಧ ನೀರು ಬಳಕೆ ಮಾಡುತ್ತಿದ್ದವರು ಬೇರೆ ಗ್ರಾಮಗಳಿಗೆ ಹೋಗಿ ನೀರು ತರಬೇಕಾಗಿದೆ. ಇನ್ನು ಕೆಲವರು ಶುದ್ಧ ನೀರಿನ ಸಹವಾಸವೇ ಬೇಡ ಎಂದು ಮಾಮೂಲಿ ನೀರನ್ನೇ ಅವಲಂಬಿಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಕೊಳವೆಬಾವಿಗಳಲ್ಲಿ ಸವಳು ನೀರು ಇರುವುದರಿಂದ ಈ ಘಟಕಗಳೂ ನಿರುಪಯುಕ್ತವಾಗಿವೆ. ಇನ್ನೂ ಕೆಲವು ಕಡೆ ಘಟಕಗಳು ನೀರು ಇದ್ದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.
ಗ್ರಾಮೀಣರ ಆರೋಗ್ಯದ ದೃಷ್ಟಿಯಿಂದ ಲಕ್ಷಾಂತರ ರು. ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಅವು ಸ್ಥಗಿತಗೊಂಡು ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮೀಣರು ಶುದ್ಧ ಕುಡಿಯುವ ನೀರಿಗಾಗಿ ಹಿರೇಕೆರೂರು ಪಟ್ಟಣಕ್ಕೆ ಬರಬೇಕಾದ ಪರಿಸ್ಥಿತಿ ಒದಗಿದೆ ಎಂದು ಗಂಗನಗೌಡ ಬುರಡಿಕಟ್ಟಿ ಗ್ರಾಮಸ್ಥ ತಮ್ಮ ಅಳಲು ತೋಡಿಕೊಂಡರು.
ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಗೊಂಡಾಗಿಂದ ಜನರು ಅದನ್ನೇ ಬಳಸುತ್ತಿದ್ದರು. ಈಗ ಕೆಲವರು ಪಟ್ಟಣದಿಂದ ನೀರು ತಂದು ಸೇವಿಸುತ್ತಿದ್ದಾರೆ. ಇನ್ನು ಕೆಲವರು ಹಳ್ಳಿಗಳಲ್ಲಿ ನಮ್ಮೂರಲ್ಲಿ ಶುದ್ಧ ನೀರಿನ ಘಟಕ ಸ್ಥಗಿತಗೊಂಡು 3 ವರ್ಷ ಆಗುತ್ತಾ ಬಂತು, ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೂ ಹಿರೇಕೆರೂರಿಗೆ ಹೋಗಿ ಫಿಲ್ಟರ್‌ನೀರು ತರುತ್ತಿದ್ದಾರೆ. ಲಭ್ಯವಿರುವ ಕೊಳವೆಬಾವಿ ನೀರು ಬಳಸುತ್ತಿದ್ದಾರೆ. ಮಕ್ಕಳ ಮತ್ತು ವಯೋವೃದ್ಧರ ಮೇಲೆ ಅದರ ಪರಿಣಾಮ ಉಂಟಾಗುತ್ತಿದ್ದು, ಶೀತ, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡು ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಸ್ಥಗಿತಗೊಂಡಿರುವ ಘಟಕ ಸುಸ್ಥಿತಿಗೆ ತಂದು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತಾಂತ್ರಿಕ ಕಾರಣದಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ರಿಪೇರಿಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರೆ ಶುದ್ಧ ಸಿಹಿ ನೀರು ಕೂಡುವ ವ್ಯವಸ್ಥೆ ಮಾಡಲಾಗುವುದು ಎಂದು ಪಿಡಿಒ ವೀರನಗೌಡ ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.