ಸ್ವಚ್ಛ ಸಾಗರ, ಸುರಕ್ಷಿತ ಸಾಗರ 2026 ಅಭಿಯಾನ

KannadaprabhaNewsNetwork |  
Published : Sep 21, 2026, 02:30 AM IST
ಠಾಗೋರ್ ಬೀಚ್‌ನಲ್ಲಿ 438.99 ಕೆಜಿ ತ್ಯಾಜ್ಯ ಸಂಗ್ರಹ ಮಾಡಲಾಯಿತು. | Kannada Prabha

ಸಾರಾಂಶ

ಸುಮಾರು 1 ಕಿ.ಮೀ. ಉದ್ದ, 600 ಮೀ. ಅಗಲದಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಒಟ್ಟು 438.99 ಕೆ.ಜಿ. ಬೀಚ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಕಾರವಾರ: ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಧೀನದ ಚೆನ್ನೈನ ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ ಸಂಯೋಜಿಸಿರುವ ‘ಸ್ವಚ್ಛ ಸಾಗರ, ಸುರಕ್ಷಿತ ಸಾಗರ 2026’ ರಾಷ್ಟ್ರವ್ಯಾಪಿ ಕರಾವಳಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ಶನಿವಾರ ಸ್ವಚ್ಛತಾ ಅಭಿಯಾನ ನಡೆಸಲಾಯಿತು.ಕರ್ನಾಟಕ ವಿಶ್ವವಿದ್ಯಾಲಯ ಪಿ.ಜಿ. ಕೇಂದ್ರದ ಮೆರೈನ್ ಬಯಾಲಜಿ ಅಧ್ಯಯನ ವಿಭಾಗದ ಪ್ರೊಫೆಸರ್ ಜೆ.ಎಲ್. ರಾಥೋಡ್ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪಿ.ಜಿ. ಕೇಂದ್ರದ ಬೋಧಕ ಹಾಗೂ ಸಿಬ್ಬಂದಿ ವರ್ಗ, ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರವಾರ ವಿಭಾಗ, ವಿಜ್ಞಾನ ಕೇಂದ್ರ ಕಾರವಾರ, ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ಅಂಚೆ ಕಚೇರಿ ಸಿಬ್ಬಂದಿ ಮತ್ತು ಕಾರವಾರ ಸೈಕಲ್ ಕ್ಲಬ್ ಸದಸ್ಯರು ಭಾಗವಹಿಸಿದರು.ಸುಮಾರು 1 ಕಿ.ಮೀ. ಉದ್ದ, 600 ಮೀ. ಅಗಲದಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಒಟ್ಟು 438.99 ಕೆ.ಜಿ. ಬೀಚ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ತ್ಯಾಜ್ಯದಲ್ಲಿ 3,495ಕ್ಕೂ ಅಧಿಕ ವಸ್ತುಗಳನ್ನು ಗುರುತಿಸಿ 45 ವಿವಿಧ ವರ್ಗಗಳಾಗಿ ವೈಜ್ಞಾನಿಕವಾಗಿ ವಿಂಗಡಿಸಲಾಯಿತು.

ಸಂಗ್ರಹಿಸಿದ ತ್ಯಾಜ್ಯವನ್ನು ವಿಂಗಡಿಸಿ ಸೂಕ್ತ ವಿಲೇವಾರಿಗಾಗಿ ನಗರಸಭೆಗೆ ಹಸ್ತಾಂತರಿಸಲಾಯಿತು. ಬೀಚ್ ಸ್ವಚ್ಛತೆಯ ಜೊತೆಗೆ ಕರಾವಳಿ ತ್ಯಾಜ್ಯದ ವಿಧ, ಪ್ರಮಾಣ ಹಾಗೂ ಸಂಯೋಜನೆಯ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹಿಸಿರುವುದು ಸಮುದ್ರ ತ್ಯಾಜ್ಯದ ಮೂಲಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ದೀರ್ಘಕಾಲೀನ ಕರಾವಳಿ ಮಾಲಿನ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಪ್ರೊ. ಜೆ.ಎಲ್. ರಾಥೋಡ್ ತಿಳಿಸಿದರು. ಕರಾವಳಿ ಪರಿಸರ ಹಾಗೂ ಸಮುದ್ರ ಜೀವವೈವಿಧ್ಯ ಸಂರಕ್ಷಣೆಗೆ ನಿಯಮಿತ ಸ್ವಚ್ಛತಾ ಕಾರ್ಯ, ವೈಜ್ಞಾನಿಕ ಮೇಲ್ವಿಚಾರಣೆ, ಸಾರ್ವಜನಿಕ ಜಾಗೃತಿ ಹಾಗೂ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಅಗತ್ಯ ಎಂದು ಅವರು ಹೇಳಿದರು.ಗಾಂಧೀಜಿ ಆಶಯದಂತೆ ಸ್ವಚ್ಛತಾ ಅಭಿಯಾನ

ಕಾರವಾರ: ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನಾಚರಣೆ ಅಂಗವಾಗಿ ನಗರದ ರವೀಂದ್ರನಾಥ ಟಾಗೋರ್ ಬೀಚ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಮುಖ್ಯ ಸಂಘಟಕರು ಬಿ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಅವರ ನೇತೃತ್ವದಲ್ಲಿ ಅಭಿಯಾನ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಟಿ. ನಾಯ್ಕ, ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಹಾಗೂ ಸಮಾಜದಲ್ಲಿ ಒಗ್ಗಟ್ಟಿನ ಮಹತ್ವವನ್ನು ಸದಾ ಪ್ರತಿಪಾದಿಸಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ, ಸ್ವಚ್ಛತಾ ಅಭಿಯಾನವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ ಎಂದರು.ಅಭಿಯಾನದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಗೋಪಾಲಕೃಷ್ಣ ನಾಯಕ, ರಾಷ್ಟ್ರೀಯ ಸೇವಾದಳದ ಸಂಯೋಜಕ ಸೂರಜ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟ್ಕರ್, ಉಪಾಧ್ಯಕ್ಷ ಬಾಬು ಶೇಕ್, ಕಾರವಾರ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಪಿ. ನಾಯಕ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ಸೇವಾದಳದ ಅಧ್ಯಕ್ಷ ರಾಜೇಂದ್ರ ಅಂಚೆಕರ್, ಎನ್‌ಎಸ್‌ಯುಐ ಅಧ್ಯಕ್ಷ ವಿಶ್ವ ಮಡಿವಾಳ, ದೇವಾನಂದ ಠಾಣೆಕರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಕ್ಬಾಲ್ ಸೈಯದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ