ಶಿರಸಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆಯ ದಿನ ಸಾರ್ವಜನಿಕರು ಎಸೆದಿದ್ದ ತ್ಯಾಜ್ಯವನ್ನು ಶಿರಸಿ ಜೀವಜಲ ಕಾರ್ಯಪಡೆ ಮಂಗಳವಾರ ಸಂಪೂರ್ಣವಾಗಿ ಸ್ವಚ್ಛಗೊಳಿಸಿದೆ. ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ತಂಡ ಹಾಗೂ ಬಿಜೆಪಿ ಕಾರ್ಯಕರ್ತರು ಈ ಕಾರ್ಯ ನಡೆಸುವ ಮೂಲಕ ಮೋದಿಯವರ ಸ್ವಚ್ಛ ಭಾರತ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ.
ಹಳೆಯ ಕಸವೂ ಸ್ವಚ್ಛ: ನಗರದ ಹೊರವಲಯದಲ್ಲಿ ಇರುವ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಇತ್ತೀಚಿನ ವರ್ಷಗಳಲ್ಲಿ ಮೋಜು ಮಸ್ತಿಯ ತಾಣವಾಗುತ್ತಿದೆ. ಕ್ರೀಡಾಂಗಣದ ಸುತ್ತ ಇರುವ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಕುಳಿತು ಪಾರ್ಟಿ ಮಾಡುವವರು ಜಾಸ್ತಿ. ಹೀಗಾಗಿ ಈ ವಾತಾವರಣದಲ್ಲಿ ಖಾಲಿ ಬಾಟೆಲ್, ಗುಟ್ಕಾ ಪ್ಯಾಕೇಟ್, ನೀರಿನ ಬಾಟೆಲ್ ಜಾಸ್ತಿ ಬಿದ್ದಿದ್ದವು.
ಜೀವಜಲ ಕಾರ್ಯಪಡೆ ಕಾರ್ಯಕರ್ತರು ಈ ಎಲ್ಲ ಹಳೇ ತ್ಯಾಜ್ಯಗಳನ್ನೂ ಸಂಗ್ರಹಿಸಿ ಬುಟ್ಟಿ ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ್ದಾರೆ. ಈ ಮೂಲಕ ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶ ಶುಭ್ರವಾಗಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಆರ್. ವಿ. ಹೆಗಡೆ ಚಿಪಗಿ, ಎಂ. ಎಂ. ಭಟ್ ಇತರರಿದ್ದರು. ಸುಂದರ ಪ್ರದೇಶ: ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶ ಶುಭ್ರವಾಗಿಸುತ್ತಿದ್ದು, ಇಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡುತ್ತೇವೆ. ಈ ಪ್ರದೇಶವನ್ನು ತ್ಯಾಜ್ಯಗಳ ಬದಲು ಸುಂದರ ಪ್ರದೇಶವಾಗಿಸಲಾಗುತ್ತಿದೆ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದರು.