ಆಯಿಷ್‌ ನಲ್ಲಿ ಪ್ರಿ ಸ್ಕೂಲ್‌ ಪದವಿ ಪ್ರದಾನ

KannadaprabhaNewsNetwork |  
Published : May 01, 2024, 01:20 AM IST
21 | Kannada Prabha

ಸಾರಾಂಶ

ಬೌದ್ಧಿಕ ಅಥವಾ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳಿಗೂ ಎಲ್ಲರಂತೆ ಸಾಮಾನ್ಯ ಸ್ಥಳದಲ್ಲಿಯೇ ಶಿಕ್ಷಣ, ಆರೋಗ್ಯ ಕಾಳಜಿ ಪಡೆಯುವುದು ಅವರ ಹಕ್ಕಾಗಿದೆ. ಪ್ರತ್ಯೇಕಿಸಿ ನೋಡುವುದಿಂದ ಇದು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡ ಇದೇ ಆಲೋಚನೆಯಿಂದ ಕಾರ್ಯ ನಿರ್ವಹಿಸುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಅಖಿಲ ಭಾರತೀಯ ವಾಕ್‌ ಮತ್ತು ಶ್ರವಣ ಸಂಸ್ಥೆಯ(ಆಯಿಷ್‌) ವಿಶೇಷ ಶಿಕ್ಷಣ ವಿಭಾಗವು ಮಂಗಳವಾರ ಆಯೋಜಿಸಿದ್ದ ಪ್ರಿ ಸ್ಕೂಲ್‌ ಪದವಿ ಪ್ರಧಾನ ಸಮಾಂರಂಭದಲ್ಲಿ 162 ವಿಶೇಷ ಮಕ್ಕಳು ಮತ್ತು ಅವರ ಪೋಷಕರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಆಷಿಷ್ ನ ನಾಲೆಡ್ಜ್ ಪಾರ್ಕ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 162 ವಿಶೇಷ ಮಕ್ಕಳು ಮತ್ತು ಅವರ ಪೋಷಕರನ್ನು ವಿಶೇಷ ಶಿಕ್ಷಣ ವಿಭಾಗದ ಪ್ರೀಸ್ಕೂಲ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದನ್ನು ಸಂಭ್ರಮಿಸಿದರು. ಅವರಲ್ಲಿ 145 ಮಕ್ಕಳು (ಶೇ.89) ಮುಖ್ಯವಾಹಿನಿಗೆ ಬರುತ್ತಿದ್ದು, ಉಳಿದ 17 ಮಕ್ಕಳು (ಶೇ. 11) ಪಾರ್ಶ್ವ ಸಮನ್ವಯ ಶಿಕ್ಷಣ ಪಡೆಯಲು ಸಿದ್ಧರಾಗಿದ್ದಾರೆ. ಮಕ್ಕಳು ಪದವೀಧರರ ಬಟ್ಟೆ ಧರಿಸಿ, ತರಬೇತಿಯ ಸರ್ಟಿಫಿಕೇಟ್‌ ಪಡೆದು ಪೋಷಕರೊಂದಿಗೆ ಖುಷಿಪಟ್ಟರು.

ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದ ರಾಜ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪ ನಿರ್ದೇಶಕಿ ಸಿ. ಅಶ್ವತ್ಥಮ್ಮ ಮಾತನಾಡಿ, ಬೌದ್ಧಿಕ ಅಥವಾ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳಿಗೂ ಎಲ್ಲರಂತೆ ಸಾಮಾನ್ಯ ಸ್ಥಳದಲ್ಲಿಯೇ ಶಿಕ್ಷಣ, ಆರೋಗ್ಯ ಕಾಳಜಿ ಪಡೆಯುವುದು ಅವರ ಹಕ್ಕಾಗಿದೆ. ಪ್ರತ್ಯೇಕಿಸಿ ನೋಡುವುದಿಂದ ಇದು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡ ಇದೇ ಆಲೋಚನೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಅನುವಂಶೀಯತೆ, ಅಪಘಾತಗಳು ಮಕ್ಕಳನ್ನು ಈ ಸಮಸ್ಯೆಗೆ ದೂಡುತ್ತದೆ. ಪೋಷಕರ ಸಹಕಾರದಿಂದ ಮಾತ್ರ ಇಂತಹ ಮಕ್ಕಳು ಉತ್ತಮ ಭವಿಷ್ಯ ಹೊಂದಬಹುದು. ಇಂದು ಸಾಕಷ್ಟು ಪೋಷಕರೂ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ಇತರ ಸಾಮಾನ್ಯ ಮಕ್ಕಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದುತ್ತಿದ್ದಾರೆ ಎಂದರು.

ಆಯಿಷ್‌ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಮಾತನಾಡಿ, ಬುದ್ಧಿಮಾಂಧ್ಯ ಅಥವಾ ಇತರ ಸಮಸ್ಯೆಯುಳ್ಳ ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ. ಸಾಕಷ್ಟು ಶ್ರಮ ಬೇಕು. ಇಲ್ಲಿ ಒಬ್ಬರನ್ನೇ ಹೊರೆ ಹೊರಲು ಬಿಡದೇ ಸಂಗಾತಿಗಳು ಒಗ್ಗಟ್ಟಾಗಿರಬೇಕು. ಮಕ್ಕಳನ್ನು ಪ್ರೇಮದಿಂದ ಸಲಹಬೇಕು ಎಂದು ಹೇಳಿದರು.

ಹೆಚ್ಚಿನ ಪ್ರಕರಣಗಳಲ್ಲಿ ಈ ಮಕ್ಕಳ ತಾಯಂದಿರನ್ನು ಒಂಟಿ ಮಾಡಲಾಗುತ್ತದೆ, ದೂಷಿಸಲಾಗುತ್ತದೆ. ಅದಾಗಬಾರದು. ಇದು ಎಲ್ಲರಿಗೂ ಮೀರಿದ ಸನ್ನಿವೇಶ. ಸಹಜವಾಗಿ ಸ್ವೀಕರಿಸಿ, ಪರಸ್ಪರ ಸಹಕರಿಸಿ ನಿಭಾಯಿಸಬೇಕು. ಸಂಸ್ಥೆಯಲ್ಲಿ 3 ವರ್ಷಕಾಲ ಮಕ್ಕಳನ್ನು ತಿದ್ದುತ್ತಾ ತಾಯಂದಿರು ಕೂಡ ಸಾಕಷ್ಟು ಬಳಲಿರುತ್ತಾರೆ. ಮಗುವೊಂದಿಗೆ ಅವರನ್ನೂ ಪ್ರೀತಿಯಿಂದ ಮನೆಗೆ ಬರ ಮಾಡಿಕೊಳ್ಳಿ. ಮಾವ, ಅತ್ತೆ ಕೂಡ ಸೊಸೆಯನ್ನು ಆದರಿಸಿ, ಮೊಮ್ಮಕ್ಕಳನ್ನು ಪ್ರೀತಿಸಿ ಎಂದು ಅವರು ಸಲಹೆ ನೀಡಿದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ