ಕೃಷ್ಣ ಎನ್. ಲಮಾಣಿ
ಹಂಪಿ ಉತ್ಸವವು ಫೆ.28, ಮಾರ್ಚ್ 1, 2ರಂದು ಮೂರು ದಿನಗಳವರೆಗೆ ನಡೆಯಲಿದೆ. ಈ ಬಾರಿ ಹಂಪಿ ಉತ್ಸವಕ್ಕೆ ಭಾರೀ ಪ್ರಮಾಣದಲ್ಲಿ ಜನರು ಹರಿದು ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಸ್ವಚ್ಛತೆ: ಹಂಪಿಯ ಪ್ರಕಾಶನಗರದ ಬಳಿಯ ಗಾಯತ್ರಿ ಪೀಠದ ಬಯಲು ಜಾಗದಲ್ಲಿ ಪ್ರಮುಖ ವೇದಿಕೆ ನಿರ್ಮಾಣಕ್ಕೆ ಜೆಸಿಬಿ ಬಳಸಿ ಸ್ವಚ್ಛತಾ ಕಾರ್ಯ ಭರದಿಂದ ನಡೆಸಲಾಗಿದೆ. ಹಂಪಿ ಉತ್ಸವದಲ್ಲಿ ಈ ವೇದಿಕೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಈ ವೇದಿಕೆ ಮುಂಭಾಗದಲ್ಲಿ ಸಾವಿರಾರು ಕುರ್ಚಿಗಳನ್ನು ಹಾಕಲಾಗುತ್ತದೆ. ಆಕರ್ಷಕ ವೇದಿಕೆ ನಿರ್ಮಾಣಕ್ಕಾಗಿ ಈಗ ಸ್ವಚ್ಛತಾ ಕಾರ್ಯ ನಡೆದಿದೆ.2010ರಲ್ಲಿ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ವೇಳೆಯಲ್ಲಿ ಈ ಸ್ಥಳದಲ್ಲಿ ಪ್ರಮುಖ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಆಗಿನಿಂದಲೂ ಈ ಸ್ಥಳದಲ್ಲೇ ಪ್ರಮುಖ ವೇದಿಕೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಈ ಬಾರಿಯೂ ಪ್ರಮುಖ ವೇದಿಕೆ ನಿರ್ಮಾಣಕ್ಕಾಗಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
ಬಡವಿಲಿಂಗದ ಬಳಿ ಸ್ವಚ್ಛತೆ: ಹಂಪಿಯ ಬಡವಿಲಿಂಗ ಸ್ಮಾರಕದ ಬಳಿ ಪಾರ್ಕಿಂಗ್ ಸ್ಥಳಕ್ಕಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಲಾವಿದರು, ಗಣಾತಿಗಣ್ಯರು, ಗಣ್ಯರ ವಾಹನಗಳು, ಬಸ್‌ಗಳು, ಕಾರುಗಳ ನಿಲುಗಡೆಗೆ ಈ ಸ್ಥಳದಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಶ್ರೀಕೃಷ್ಣ ದೇವಾಲಯದ ಹಿಂಬದಿ ಸ್ಥಳದಲ್ಲಿ ಪಾರ್ಕಿಂಗ್ ಸ್ಥಳ ನಿರ್ಮಿಸಿದರೆ, ಪ್ರಮುಖ ಕಲಾವಿದರು, ಗಣ್ಯರನ್ನು ಕರೆತರಲು ಅನುಕೂಲವಾಗಲಿದೆ. ಜೊತೆಗೆ ಸಾರ್ವಜನಿಕರಿಗೆ ಬಸ್‌ಗಳಲ್ಲಿ ಓಡಾಡಲು ಕೂಡ ಅನುಕೂಲ ಆಗಲಿದೆ.
ಸ್ಥಳೀಯರಿಗೆ ಆಹ್ವಾನ: ಹಂಪಿ ಉತ್ಸವದಲ್ಲಿ ಈ ಬಾರಿ ಸ್ಥಳೀಯರ ಪಾಲ್ಗೊಳ್ಳುವಿಕೆಗೆ ವಿಜಯನಗರ ಜಿಲ್ಲಾಡಳಿತ ಒತ್ತು ನೀಡಿದೆ. ಹಾಗಾಗಿ ಈಗಾಗಲೇ ಕಮಲಾಪುರ ಪಪಂ ಸೇರಿದಂತೆ ಗ್ರಾಪಂಗಳ ಸದಸ್ಯರ ಜೊತೆಗೆ ಸಭೆ ನಡೆಸಿದೆ. ಹೊಸಪೇಟೆಯಲ್ಲೂ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆದಿದೆ.
ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಂಪಿ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ಉತ್ಸವ ನಡೆಸಲಾಗುವುದು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್.