ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಕೆರೆ, ಕಟ್ಟೆಗಳ ಒತ್ತುವರಿ ತೆರವುಗೊಳಿಸಿ ಮಳೆ ನೀರು ನಿಲ್ಲುವುದಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ರೈತರ ಹಿತ ಕಾಯಬೇಕು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ಇಂದಿನಿಂದಲೇ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದರ ಜೊತೆಗೆ ಅಂತರ್ಜಲದ ಮಟ್ಟ ಹೆಚ್ಚಾಗಲಿದೆ ಎಂದರು.
ಸರ್ಕಾರಿ ಆಸ್ತಿಗಳ ಅಕ್ರಮ ಪರಭಾರೆ:ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ಅಧಿಕಾರಿಗಳ ಕರ್ತವ್ಯ. ತಾಲೂಕಿನಲ್ಲಿರುವ ಸರ್ಕಾರಿ ಆಸ್ತಿಗಳನ್ನು ಗುರುತಿಸಿ ಅಕ್ರಮವಾಗಿ ಒತ್ತುವರಿ ಮಾಡದಂತೆ ಎಚ್ಚರಿಕೆ ವಹಿಸಬೇಕು. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಪರಭಾರೆಯಾಗಿದ್ದು, ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಯಾರದೋ ಆಸ್ತಿಯನ್ನು ಮತ್ಯಾರೋ ಖಾತೆ ಮಾಡಿಸಿಕೊಳ್ಳುವ ದಂಧೆ ಇದೆ. ಪೌತಿ ಖಾತೆ ಮಾಡಿಸಿಕೊಳ್ಳದೇ ಇರುವುದು ಅಕ್ರಮ ಆಸ್ತಿ ಗಳಿಕೆಗೆ ದಾರಿ ಮಾಡಿಕೊಡಬಹುದು. ಅದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಿಕೊಂಡು ಅಣ್ಣ-ತಮ್ಮಂದಿರಲ್ಲಿ ಆಸ್ತಿ ವ್ಯಾಜ್ಯವನ್ನು ಸರಿಮಾಡಿಕೊಂಡು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲು ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಿದೆ, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಮುಖ್ಯಮಂತ್ರಿಗಳ ಆಶಯದಂತೆ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತರು ಇಂತಹ ಕಾರ್ಯಕ್ರಮಗಳ ಸದುಪಯೋಗದ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದರ ಮೂಲಕ ಸಮಸ್ಯೆಗಳ ನಿವಾರಣೆಗೆ ಸಹಕಾರ ನೀಡಬೇಕು ಎಂದರು.ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬರುತ್ತಿದ್ದು, ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.
331 ಅರ್ಜಿ ಸ್ವೀಕೃತ:ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಹಿಂದೆ ಮಳವಳ್ಳಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ 331 ಕ್ಕೂ ಹೆಚ್ಚು ಅರ್ಜಿ ಸ್ವೀಕೃತವಾಗಿತ್ತು. ಅದರಲ್ಲಿ ೧೭೦ ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಆರ್.ಟಿ.ಸಿ ತಿದ್ದುಪಡಿ ಅರ್ಜಿಗಳೇ ಹೆಚ್ಚಾಗಿದ್ದವು. ೧೧೦ ಅರ್ಜಿಗಳಲ್ಲಿ ನಮೂದಿಸಲಾಗಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಉಳಿದ ೬೦ ಅರ್ಜಿಗಳು ಕಾನೂನು ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಎಲ್ಲಾ ಅರ್ಜಿಗಳಿಗೂ ಹಿಂಬರಹ ನೀಡಲಾಗಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಮಟ್ಟಕ್ಕೆ ಬರುವ ಬದಲು ಆಧಿಕಾರಿಗಳೇ ಜನರ ಬಳಿಗೆ ತಾಲೂಕು, ಹೋಬಳಿ ಮಟ್ಟಕ್ಕೆ ಬಂದು ಸಮಸ್ಯೆ ಪರಿಹರಿಸಬೇಕು ಎಂಬುದು ಜನಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವೀಕೃತವಾಗಿರುವ ಶೇ.೧೦೦ ರಷ್ಟು ಅರ್ಜಿಗಳಿಗೆ ಪರಿಹಾರ ನೀಡಿ ವಿಲೇ ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಾನೂನು ಪರಿಮಿತಿಯ ಹೊರಭಾಗದಲ್ಲಿರುತ್ತವೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟಕರ. ಕಾನೂನು ವ್ಯಾಪ್ತಿಯಲ್ಲಿ ಇರುವ ಅರ್ಜಿಗಳನ್ನು ಶೀಘ್ರ ಹಾಗೂ ಪಾರದರ್ಶಕವಾಗಿ ವಿಲೇ ಮಾಡಲಾಗುತ್ತಿದೆ ಎಂದರು.ಆರ್‌ಟಿಸಿಗಳಿಗೆ ಆಧಾರ್ ಜೋಡಣೆ:
ರೈತರು ತಮ್ಮ ಜಮೀನಿನ ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಮಾಡಬೇಕು, ಜಿಲ್ಲೆಯಲ್ಲಿ ಶೇ೩೦ ರಷ್ಟು ಮಾತ್ರ ಆಧಾರ್ ಸೀಡಿಂಗ್ ಆಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಬೇಕು ಎಂದರು.ಬೆಳೆ ವಿಮೆ ಮಾಡಿಕೊಳ್ಳಲು ಜುಲೈ ೧೫ ರವರೆಗೆ ಅವಕಾಶವಿದೆ. ಕಳೆದ ಬಾರಿ ಸುಮಾರು ೭೨ ಸಾವಿರ ರೈತರು ಬೆಳೆ ವಿಮೆ ಮಾಡಿಸಿಕೊಂಡು ಬೆಳೆ ನಷ್ಠದ ಹಿನ್ನಲೆ ೨೫ ಕೋಟಿ ಬೆಳೆ ಪರಿಹಾರ ಕೊಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಲ್ಲೂಕು ನೋಡಲ್ ಅಧಿಕಾರಿ ಕೆ.ಎಂ ಸುರೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ತಹಶೀಲ್ದಾರ್ ಲೋಕೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಮತ, ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸೌಲಭ್ಯ ವಿತರಣೆ:
ಸುಕನ್ಯ ಸಮೃಂದ್ಧಿ ಯೋಜನೆಯಡಿ ಪಾಸ್ ಬುಕ್ ವಿತರಣೆ, ಅಂಗನವಾಡಿ ಕಾಯ೯ಕತ೯ರಿಗೆ ಮೊಬೈಲ್, ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಆತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌ಗಳನ್ನು ವಿತರಿಸಲಾಯಿತು. ಫಸಲ್ ಭೀಮ ಯೋಜನೆ ಪ್ರಚಾರದ ಭಿತ್ತಿ ಪತ್ರವನ್ನು ಶಾಸಕ ಪಿ.ಎಂ ನರೇಂದ್ರಸ್ವಾಮಿ ಸೇರಿದಂತೆ ಅಧಿಕಾರಿಗಳು ಬಿಡುಗಡೆಗೊಳಿಸಿದರು.ಗಮನ ಸೆಳೆದ ಮನವಿ:
ಜನಸ್ಪಂದನಾ ಸಭೆಯಲ್ಲಿ ಬಾಣಸಮುದ್ರ ಗ್ರಾಮಸ್ಥರು ಮನವಿ ಸಲ್ಲಿಸಿ ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಸ್ವಂತ ನಿವೇಶನವಿಲ್ಲ, ಸರ್ಕಾರಿ ಭೂಮಿಯನ್ನು ಗುರುತಿಸಿ ಕಟ್ಟಡಗಳ ನಿರ್ಮಾಣವಾಗುವಂತೆ ಸಹಕಾರ ನೀಡಬೇಕೆಂದು ಕೋರಿದರು. ಜಿಲ್ಲಾಧಿಕಾರಿ ಡಾ. ಕುಮಾರ್ ಸ್ಥಳದಲ್ಲಿಯೇ ಕ್ರಮ ಕೈಗೊಂಡು ನಿವೇಶನ ಗುರುತಿಸಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಲೋಕೇಶ್ ಅವರಿಗೆ ಅದೇಶ ನೀಡಿದರು.ಅರ್ಜಿ ಸಲ್ಲಿಕೆ:
ಕಂದಾಯ, ಅರಣ್ಯ , ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ ಸೇರಿದಂತೆ ಪುರಸಭೆ ಸಂಬಂಧಿಸಿದಂತೆ ಜನ ಸ್ಪಂದನಾ ಸಭೆಯಲ್ಲಿ 331 ಅರ್ಜಿಗಳು ಸಲ್ಲಿಕೆಯಾಗಿವೆ, ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಹಾಜರಾಗಿ ಅಹವಾಲುಗಳನ್ನು ಸ್ವೀಕರಿಸಿದರು. ಅಲ್ಲಿಕೆಯಾಗಿರುವ ಅರ್ಜಿಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದರು.