ಭಟ್ಕಳ:ತಾಲೂಕಿನ ಹೆಬಳೆಯ ತೆಂಗಿನಗುಂಡಿ ಬಂದರಿನ ಆವರಣದಲ್ಲಿ ಸೋಮವಾರ ಸಂಸದ ಅನಂತಕುಮಾರ ಹೆಗಡೆ ಸಮ್ಮುಖದಲ್ಲಿ ಕಾರ್ಯಕರ್ತರು ಈ ಮೊದಲು ತೆರವುಗೊಳಿಸಿದ್ದ ಭಗವಾಧ್ವಜ ಮತ್ತು ವೀರಸಾವರ್ಕರ್ ಬೀಚ್ ಎನ್ನುವ ನಾಮಫಲಕವನ್ನು ಮತ್ತೆ ಅಳವಡಿಸಿದರು. ಈ ವೇಳೆ ಜೈ ಶ್ರೀರಾಮ ಮತ್ತು ಹರಹರ ಮಹಾದೇವ್ ಎಂದು ಘೋಷಣೆ ಕೂಗಿದರು.ಜನವರಿಯಲ್ಲಿ ತೆಂಗಿನಗುಂಡಿಯ ಬಂದರಿನ ಆವರಣದಲ್ಲಿನ ಕಟ್ಟೆಗೆ ವೀರಸಾವರ್ಕರ್ ಬೀಚ್ ಎನ್ನುವ ಫಲಕ ಹಾಕಿ ಭಗವಾಧ್ವಜ ಹಾಕಲಾಗಿತ್ತು. ಆದರೆ ಜ. 27ರಂದು ಹೆಬಳೆ ಗ್ರಾಪಂ ಅಧಿಕಾರಿಗಳು ಇಲ್ಲಿ ಫಲಕ ಮತ್ತು ಭಗವಾಧ್ವಜ ಹಾಕಲು ಪರವಾನಗಿ ಪಡೆದಿಲ್ಲ ಎಂದು ನಾಮಫಲಕ ಮತ್ತು ಕಟ್ಟೆಯನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು, ಇಲ್ಲಿ ಫಲಕ ಅಳವಡಿಸುವ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಠರಾವು ಮಾಡಲಾಗಿದೆ. ಠರಾವು ಮಾಡಿದ್ದರೂ ನಾಮಫಲಕ ಮತ್ತು ಕಟ್ಟೆ ತೆರವುಗೊಳಿಸಿರುವುದು ಸರಿಯಲ್ಲ ಎಂದು ಪಂಚಾಯಿತಿ ಎದುರು ಧರಣಿ ಕುಳಿತಿದ್ದರು. ಈ ವೇಳೆ ತೆರವುಗೊಳಿಸಿದ ಸ್ಥಳದಲ್ಲೇ ಭಗವಾಧ್ವಜ ಮತ್ತು ವೀರಸಾವರ್ಕರ್ ನಾಮಫಲಕ ಹಾಕಲೇಬೇಕು ಎಂದು ಪಟ್ಟು ಹಿಡಿದು, ಅಂದು ಸ್ಥಳಕ್ಕೆ ತೆರಳಿ ನಾಮಫಲಕ ಹಾಕಲು ಕಟ್ಟೆ ನಿರ್ಮಿಸಿದ್ದರು.ಆ ದಿನದಿಂದ ಈ ವರೆಗೂ ಇದೊಂದು ವಿವಾದಿತ ವಿಷಯವಾಗಿಯೇ ಆಗುತ್ತು. ಆದರೆ ಸೋಮವಾರ ಭಟ್ಕಳದ ವಿವಿಧೆಡೆ ಕಾರ್ಯಕರ್ತರನ್ನು ಭೇಟಿಯಾಗಲು ಆಗಮಿಸಿದ ಸಂಸದ ಅನಂತಕುಮಾರ ಹೆಗಡೆ, ಹೆಬಳೆ ಭಾಗಕ್ಕೆ ಹೋದಾಗ ಕಾರ್ಯಕರ್ತರು ನಾಮಫಲಕ ಮತ್ತು ಭಗವಾಧ್ವಜ ಹಾಕುವ ಕಟ್ಟೆ ತೆರವುಗೊಳಿಸಿದ ಬಗ್ಗೆ ಅವರ ಗಮನಕ್ಕೆ ತಂದರು. ಈ ವಿಚಾರವನ್ನು ಕೇಳಿ ತಡಮಾಡದ ಸಂಸದರು ತೆಂಗಿನಗುಂಡಿ ಬಂದರಿನ ಆವರಣಕ್ಕೆ ತೆರಳಿ ಕಟ್ಟೆ ನಿರ್ಮಿಸಿದ ಸ್ಥಳ ವೀಕ್ಷಿಸಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ವೀರಸಾವರ್ಕರ್ ನಾಮಫಲಕ ಮತ್ತು ಭಗವಾಧ್ವಜ ಪುನಃ ಸ್ಥಳದಲ್ಲಿ ಹಾಕಿ ಜೈ ಶ್ರೀರಾಮ ಮತ್ತು ಹರಹರ ಮಹಾದೇವ್ ಎಂದು ಘೋಷಣೆ ಕೂಗಿದರು.ಈ ವೇಳೆ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡರು, ಕಾರ್ಯಕರ್ತರಿದ್ದರು.