ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕಾಗಿ ಬೃಹತ್ ಹುಣಸೆ ಮರಗಳ ತೆರವು, ಆಕ್ರೋಶ

KannadaprabhaNewsNetwork |  
Published : May 30, 2024, 12:50 AM IST
ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿನ ಹುಣಸೆ ಮರಗಳು ನೆಲಕ್ಕುರಳಿರುವುದು. | Kannada Prabha

ಸಾರಾಂಶ

ಕೆಲ ದಿನಗಳ ಹಿಂದೆ ಬೇಸಿಗೆಯಲ್ಲಿ ಬಿಸಿಲ ತಾಪಕ್ಕೆ ಜನತೆ ತತ್ತರಿಸಿದ ಅನುಭವ ಇನ್ನೂ ಜೀವಂತವಾಗಿದೆ

ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣದ ಹಿನ್ನೆಲೆಯಲ್ಲಿ ಎರಡು ಬೃಹತ್ ಹುಣಸೆ ಮರಗಳನ್ನು ಪುರಸಭೆ ಮನವಿಗೆ ಅರಣ್ಯ ಇಲಾಖೆ ಮರ ನೆಲಕ್ಕೆರುಳಿಸಿದೆ.

ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿನ ಮರದ ಕೊಂಬೆಯೊಂದು ಮುರಿದು ಬಿದ್ದು ಕೆಲ ವಾಹನಗಳು ಜಖಂಗೊಂಡಿದ್ದವು. ಈಗ ಪಟ್ಟಣದ ಹೃದಯ ಭಾಗವಾಗಿರುವ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣದ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ೬ ದಶಕದ ೨ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ನೀಡಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸರ್ಕಾರ ತಾಲೂಕಿಗೊಂದು ಇಂದಿರಾ ಕ್ಯಾಂಟಿನ್‌ ಮಾಡುವ ಉದ್ದೇಶವಿದ್ದರೂ ಸಹ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಿಲ್ಲ. ಹೀಗಾಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಆಡಳಿತ ಮುಂದಾಗಬೇಕು ಎನ್ನುವ ಆಗ್ರಹಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಪರಿಣಾಮ ಶಾಸಕ ಜಿ.ಎಸ್. ಪಾಟೀಲ ಕೆಲ ತಿಂಗಳ ಹಿಂದೆ ಅಧಿಕಾರಿಗಳೊಂದಿಗೆ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ಪರಿಶೀಲನೆ ಜತೆಗೆ ಸೂಕ್ತ ಜಾಗದ ಬಗ್ಗೆ ಚರ್ಚಿಸಿದ ಬಳಿಕ ತಹಸೀಲ್ದಾರ್ ಕಚೇರಿ ಆವರಣ ನಿಗದಿ ಮಾಡಿದ್ದರು.

ವರ್ಷದಿಂದ ವರ್ಷಕ್ಕೆ ಏರುತ್ತಿರುವ ತಾಪಮಾನವು ಮಾನವ ಹಾಗೂ ಪ್ರಾಣಿ ಮತ್ತು ಪಕ್ಷಿ ಕುಲವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎನ್ನುವ ವರದಿಗಳು ಬಿತ್ತರವಾಗುತ್ತಲೇ ಇವೆ. ಹೀಗಾಗಿ ಸರ್ಕಾರವು ಸಹ ಸಸಿ ನೆಡುವ ಹಾಗೂ ಅರಣ್ಯೀಕರಣಕ್ಕೆ ಆದ್ಯತೆ ನೀಡುತ್ತಿದೆ. ಆದರೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಹುಣಸೆ ಮರಗಳನ್ನು ಕಡಿಯುವ ಬದಲು ಅದರ ರೆಂಬೆಗಳನ್ನು ಕಡಿದಿದ್ದರೆ ಸಾರ್ವಜನಿಕರಿಗೆ ನೆರಳಿನ ಆಶ್ರಯದೊಂದಿಗೆ ಹಲವಾರು ಪಕ್ಷಿಗಳಿಗೆ ಮನೆಯಾಗಿ ಮರಗಳು ಉಳಿಯುತ್ತಿದ್ದವು. ಕೆಲ ದಿನಗಳ ಹಿಂದೆ ಬೇಸಿಗೆಯಲ್ಲಿ ಬಿಸಿಲ ತಾಪಕ್ಕೆ ಜನತೆ ತತ್ತರಿಸಿದ ಅನುಭವ ಇನ್ನೂ ಜೀವಂತವಾಗಿದೆ. ಆದರೆ ಇಂದಿರಾ ಕ್ಯಾಂಟಿನ್ ನಿರ್ಮಾಣದ ಭರದಲ್ಲಿ ಮೂಕ ಪಕ್ಷಗಳ ಆಶ್ರಯ ತಾಣವನ್ನು ಮಣ್ಣುಪಾಲು ಮಾಡುವ ಅವಶ್ಯಕತೆ ಬಗ್ಗೆ ಪರಿಸರ ಪ್ರೇಮಿಗಳು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಗುರುತು ಮಾಡಿದ ಜಾಗದಲ್ಲಿನ ಹುಣಸೆ ಮರಗಳ ಪುರಸಭೆಯಿಂದ ತೆರವಿಗೆ ಮನವಿ ಮಾಡಿದ್ದರ ಹಿನ್ನೆಲೆ೨ ಹುಣಸೆ ಮರಗಳನ್ನು ತೆರವು ಮಾಡಲಾಗಿದೆ ಎಂದು ತಾಲೂಕು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಇಂದಿರಾ ಕ್ಯಾಂಟಿನ್ ಆವರಣದಲ್ಲಿ ಜಾಗ ಮಾಡಿದ್ದರಿಂದ ಈ ಹಿಂದೆ ಪುರಸಭೆಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಈಗ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ತೆರವು ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ