ಹಳ್ಳ ಮುಚ್ಚಿ ಪ್ರತಿಷ್ಠಿತ ಹೋಟೆಲ್‌ನಿಂದ ನಿವೇಶನವಾಗಿ ಮಾರ್ಪಾಡು..!

KannadaprabhaNewsNetwork |  
Published : Oct 30, 2025, 01:45 AM IST
27ಕೆಎಂಎನ್ ಡಿ15 | Kannada Prabha

ಸಾರಾಂಶ

ಹಳ್ಳದ ನೀರು ಮಳೆಗಾಲದಲ್ಲಿ ತುಂಬಿ ಹರಿಯುವಾಗ ಸರಾಗವಾಗಿ ಹರಿದು ಪುರ ಗ್ರಾಮದ ಕೆರೆ ತಲುಪಲು ಸಾಧ್ಯವಾಗುತ್ತಿಲ್ಲ. ಹೋಟೆಲ್‌ನ ಮೂತ್ರದ ನೀರು ಹಳ್ಳದ ನೀರಿಗೆ ಸೇರಿ ಶುದ್ಧನೀರು ಮಲೀನಗೊಳ್ಳುತ್ತಿದೆ. ಹಳ್ಳವನ್ನು ಮುಚ್ಚಿದ ಪರಿಣಾಮ ಕೋಟ್ಯಂತರ ರು.ಬೆಲೆ ಬಾಳುವ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಯ ಹಿಡಿತಕ್ಕೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರತಿಷ್ಠಿತ ಹೋಟೆಲ್‌ ಹಳ್ಳವನ್ನು ಮುಚ್ಚಿ ನಿವೇಶನವನ್ನಾಗಿ ಮಾರ್ಪಡಿಸಿಗೊಂಡಿರುವ ಪ್ರಕರಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿ ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಪ್ರತಿಷ್ಠಿತ ರಾಯಲ್ ಕಂಫರ್ಟ್ ಹೋಟೆಲ್ ಅನ್ನು ಮುಂಬೈ ನಿವಾಸಿ, ಸ್ಥಳೀಯ ಪ್ರಭಾವಿ ವ್ಯಕ್ತಿ ಆರಂಭಿಸಿದ್ದು, ಪಕ್ಕದಲ್ಲಿಯೇ ಸರ್ಕಾರಿ ಹಳ್ಳವಿದೆ. ಪುರ ಗ್ರಾಮದ ಕೆರೆಗೆ ನೀರು ಹರಿದು ಹೋಗುತ್ತಿದೆ.

ಹೋಟೆಲ್ ಉದ್ಯಮ ವಿಸ್ತರಿಸಿದಂತೆ ಹೋಟೆಲ್ ಪಕ್ಕದ ಕೃಷಿ ಭೂಮಿ ಸಮತಟ್ಟುಗೊಳಿಸಿಕೊಂಡಿರುವ ಹೋಟೆಲ್ ಮಾಲೀಕರು ಸರ್ಕಾರಿ ಹಳ್ಳಕ್ಕೆ ಸ್ಲ್ಯಾಬ್ ಹಾಕಿ ಕೆಳಭಾಗದಲ್ಲಿ ಹಳ್ಳಿದ ನೀರು ಹರಿದು ಹೋಗಲು ಕಿರುಗಿಂಡಿ ಮಾಡಿ ಹಳ್ಳದ ಮೇಲ್ಬಾಗವನ್ನು ನಿವೇಶನವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಜೊತೆಗೆ ಹೋಟೆಲ್ ಗ್ರಾಹಕರ ಮೂತ್ರಾಲಯದ ನೀರನ್ನು ಇದೇ ಹಳ್ಳಕ್ಕೆ ಬೀಳುವಂತೆ ಪೈಪ್ ಲೈನ್ ಮಾಡಿ ಹಳ್ಳದ ಶುಚಿಯಾದ ನೀರನ್ನು ಕಲುಷಿತಗೊಳಿಸಿದ್ದಾರೆ.

ಸರ್ಕಾರಿ ನಿಯಮದ ಪ್ರಕಾರ ಯಾವುದೇ ಕೆರೆ ಕಟ್ಟೆ, ಹಳ್ಳ ಕೊಳ್ಳಗಳನ್ನು ಮುಚ್ಚುವಂತಿಲ್ಲ. ಆದರೆ, ಪ್ರಭಾವಿ ಹೋಟೆಲ್ ಮಾಲೀಕ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಹಳ್ಳಕ್ಕೆ ಸ್ಲ್ಯಾಬ್ ಅಳವಡಿಸಿಕೊಂಡು ಹಳ್ಳದ ಮೇಲ್ಬಾಗವನ್ನು ನಿವೇಶನವನ್ನಾಗಿ ಮಾರ್ಪಡಿಸಿಕೊಂಡಿದ್ದಾನೆ.

ಹಳ್ಳದ ನೀರು ಮಳೆಗಾಲದಲ್ಲಿ ತುಂಬಿ ಹರಿಯುವಾಗ ಸರಾಗವಾಗಿ ಹರಿದು ಪುರ ಗ್ರಾಮದ ಕೆರೆ ತಲುಪಲು ಸಾಧ್ಯವಾಗುತ್ತಿಲ್ಲ. ಹೋಟೆಲ್‌ನ ಮೂತ್ರದ ನೀರು ಹಳ್ಳದ ನೀರಿಗೆ ಸೇರಿ ಶುದ್ಧನೀರು ಮಲೀನಗೊಳ್ಳುತ್ತಿದೆ. ಹಳ್ಳವನ್ನು ಮುಚ್ಚಿದ ಪರಿಣಾಮ ಕೋಟ್ಯಂತರ ರು.ಬೆಲೆ ಬಾಳುವ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಯ ಹಿಡಿತಕ್ಕೆ ಸಿಕ್ಕಿದೆ.

ಹಳ್ಳ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ನೀರಾವರಿ ಇಲಾಖೆ ಬಹುತೇಕ ಎಂಜಿನಿಯರುಗಳು ಇದೇ ಹೋಟೆಲ್‌ಗೆ ಆಗಾಗ್ಗೆ ಭೋಜನಕ್ಕೆ ಸೇರುತ್ತಾರೆ. ಆದರೆ, ತಮ್ಮ ಕಣ್ಣ ಮುಂದೆಯೇ ಹಳ್ಳದ ಮೇಲ್ಬಾಗ ನಿವೇಶನವಾಗಿ ಪರಿವರ್ತನೆಗೊಂಡಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಹಳ್ಳವನ್ನು ಖಾಸಗಿ ವ್ಯಕ್ತಿ ಹಿಡಿತದಿಂದ ಮುಕ್ತಗೊಳಿಸಲು ಮುಂದಾಗಿಲ್ಲ.

ಸಾಮಾಜಿಕ ಹೋರಾಟಗಾರರು ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಪಟ್ಟಣದ ವ್ಯಾಪ್ತಿ ಹಲವು ಸರ್ಕಾರಿ ಆಸ್ತಿಗಳು ವ್ಯವಸ್ಥಿತವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಆಸ್ತಿ ಸಂರಕ್ಷಿಸಬೇಕಾದ ಅಧಿಕಾರಿಗಳಿಗೆ ಕನಿಷ್ಠ ಕಾಳಜಿಯೇ ಇಲ್ಲ.

ಇದೇ ರೀತಿ ಪಟ್ಟಣ ಚೌಡೇಶ್ವರಿ ದೇವಾಲಯ ಹಿಂಭಾಗದ ಹೊಸಹೊಳಲು ಕೆರೆಗೆ ನೀರು ತಲುಪಿಸುವ ಹೇಮಾವತಿ ವಿತರಣಾ ನಾಲೆಯನ್ನು ಕೆಲವರು ಮುಚ್ಚಿ ಹಾಕಿದ್ದಾರೆ. ನಾಲೆ ಜಾಗ ಒತ್ತುವರಿ ಅಳತೆ ಮಾಡಿಸಿ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಸೂಚಿಸಿದ್ದರೂ ನೀರಾವರಿ ಅಧಿಕಾರಿಗಳು ಇಲಾಖೆ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸಿಲ್ಲ.ರಾಯಲ್ ಕಂಫರ್ಟ್‌ನವರು ಮುಚ್ಚಿ ಹಾಕಿರುವ ಹಳ್ಳವನ್ನು ತಕ್ಷಣವೇ ಸರಿಪಡಿಸಬೇಕು. ಯಾವುದೇ ಪೂರ್ವಾನುಮತಿ ಇಲ್ಲದೆ ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತೇಗನಹಳ್ಳಿ ಕೆರೆ ಖಾಸಗಿ ವ್ಯಕ್ತಿ ಹಿಡಿತದಿಂದ ಇದುವರೆಗೂ ತೆರೆವುಗೊಳಿಸಿಲ್ಲ. ನೀರಾವರಿ ಇಲಾಖೆ ಅತಿಕ್ರಮಣ ಆಸ್ತಿ ಸಂರಕ್ಷಣೆ ಮಾಡದಿದ್ದರೆ ರೈತಸಂಘ ಹೋರಾಟಕ್ಕಿಳಿಯಲಿದೆ.

-ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು