ಡಿಸೆಂಬರ್ ಒಳಗೆ ಸಿಎಂ ಬದಲಾವಣೆ ಖಚಿತ : ಆರ್‌.ಅಶೋಕ

KannadaprabhaNewsNetwork |  
Published : Oct 04, 2025, 01:00 AM IST
ಆರ್‌.ಅಶೋಕ | Kannada Prabha

ಸಾರಾಂಶ

ಮುಂಬರುವ ನವೆಂಬರ್‌ ಇಲ್ಲವೇ ಡಿಸೆಂಬರ್ ಒಳಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

  ಬೆಳಗಾವಿ :  ಮುಂಬರುವ ನವೆಂಬರ್‌ ಇಲ್ಲವೇ ಡಿಸೆಂಬರ್ ಒಳಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕ್ರಾಂತಿ ಆಗುತ್ತದೆ ಎಂಬ ಹೇಳಿಕೆ ನೀಡಿದ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಡಿ.ಕೆ.ಶಿವಕುಮಾರ ಹಠ ಬಿಡುತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದರು. ಕಾಂಗ್ರೆಸ್‌ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡುವುದಿಲ್ಲ. ನಾವು ನೇರವಾಗಿ ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ. ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಗುಂಡಿ ಇಲ್ಲದ ರಸ್ತೆ ತೋರಿಸಿದರೆ, ಬಹುಮಾನ ಕೊಡಬಹುದು ಎಂದು ಸವಾಲು ಹಾಕಿದರು.

ಬೆಟ್ಟ ಕುಸಿತದಿಂದ ಹಾಸನದಲ್ಲಿ ವ್ಯಾಪಕ ಹಾನಿಯಾಗಿದೆ. ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎನ್ನುವ ಡೈಲಾಗ್ ಸಿಎಂ ಹೊಡೆಯುತ್ತಿದ್ದಾರೆ. ಸಿಎಂ ಆದಾಗಿನಿಂದಲೂ ಸಿದ್ದರಾಮಯ್ಯ ಇದೇ ಡೈಲಾಗ್ ಹೊಡೆಯುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಇದೇ ಡೈಲಾಗ್ ಹೊಡೆದಿದ್ದಾರೆ ಎಂದ ಅವರು, ಮಳೆಯಿಂದ ಎಷ್ಟು ಹಾನಿಯಾಗಿದೆ ಎಂಬ ವರದಿ ಕೇಂದ್ರಕ್ಕೆ ಕಳುಹಿಸಬೇಕು. ಕೇಂದ್ರ ಗೃಹ ಸಚಿವ, ಕೃಷಿ ಸಚಿವರನ್ನು ರಾಜ್ಯದ ನಾಯಕರು ಈವರೆಗೆ ಭೇಟಿ ಮಾಡಿಲ್ಲ. ಮುಖ್ಯಮಂತ್ರಿ, ಸಚಿವರು ಬೇಜವಾಬ್ದಾರಿಯಿಂದ ಇದ್ದಾರೆ. ಮನೆಗಳು ಎಷ್ಟು ಹಾನಿಯಾಗಿವೆ ಎಂಬ ಬಗ್ಗೆ ಸಿಎಂ ಬಾಯಿಂದ ಬಂದಿಲ್ಲ‌. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾವಾಗ ಇಳಿತೀರಾ ಎಂದು ಅಲ್ಲಿನ ನಾಯಕರು ಕೇಳುತ್ತಿದ್ದಾರೆ ಎಂದು ಹೇಳಿದರು.

ಜವಾಬ್ದಾರಿ ಇದ್ದರೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಬೇಕಿತ್ತು. ರಾಜ್ಯದಲ್ಲಿ ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗುತ್ತಿದೆ. ಇದೊಂದು ತುಘಲಕ್ ಸರ್ಕಾರ. ಕಾಂಗ್ರೆಸ್ ಸರ್ಕಾರ ಶೇ.80 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರ ಸಂಘ ಹೇಳಿದೆ. ಲೂಟಿ ಮಾಡಲು ಎಲ್ಲಾ ಸಚಿವರು ಕಾದು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸತೀಶ ಅವರದ್ದು ಏನೂ ತಪ್ಪಿಲ್ಲ. ಸರ್ಕಾರದಲ್ಲಿ ಅಭಿವೃದ್ಧಿಗಾಗಿ ಹಣವೇ ಇಲ್ಲವಲ್ಲ. ದುಡ್ಡು ಇಲ್ಲ. ಹಾಗಾಗಿ, ಎಲೆಕ್ಷನ್‌ ಮಾಡಿ ಗೆದ್ದರೆ ಕಲೆಕ್ಷನ್‌ ಮಾಡಬಹುದೆಂಬ ಉದ್ದೇಶದಿಂದ ಎಲೆಕ್ಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಸರ್ಕಾರದಲ್ಲಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಸಾರಿಗೆ ನಿಗಮದ ₹400 ಕೋಟಿ ಬಾಕಿ ಉಳಿದಿದೆ. ವಾಲ್ಮೀಕಿ ನಿಗಮ ಸೇರಿದಂತೆ ಎಲ್ಲ ನಿಗಮಗಳ ಅನುದಾನವನ್ನು ಕಡಿತಗೊಳಿಸಲಾಗಿದೆ. ಹಣಕಾಸು ಇಲಾಖೆ ಡೆಡ್‌ ಡಿಪಾರ್ಟ್‌ಮೆಂಟ್ ಆಗಿದೆ. ಹೊಸ ನೇಮಕ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಎರಡೂವರೆ ವರ್ಷದಿಂದ ಹಣಕಾಸು ಇಲಾಖೆ ನೇಮಕಾತಿಗೆ ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಅತಿವೃಷ್ಟಿ, ಅನಾವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ರೈತರ ಬೆಳೆ ಹಾನಿಗೀಡಾಗಿದೆ. ಹಾನಿಗೀಡಾದ ಬೆಳೆ ವೀಕ್ಷಣೆಗೆ ಬಿಜೆಪಿ ನಾಯಕರ ತಂಡ ತೆರಳಿ, ಪರಿಶೀಲಿಸುತ್ತಿದೆ. ದಸರಾ ಹಬ್ಬ ಆಚರಿಸದೇ ಪ್ರವಾಹ ಸಂತ್ರಸ್ತರು ಬೀದಿಯಲ್ಲಿ ನಿಂತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜಾತಿ ಸಮೀಕ್ಷೆ ಮಾತ್ರ ಮುಖ್ಯವಾಗಿದೆ. ಜಾತಿಗಳ ನಡುವೆ ಬೆಂಕಿ ಹಚ್ಚುವುದೇ ಸಿದ್ದರಾಮಯ್ಯ ಕಾಯಕವಾಗಿದೆ. ಸಿದ್ದರಾಮಯ್ಯ ಬೆಂಕಿ ಹಚ್ಚುವ ಮುಖ್ಯಮಂತ್ರಿಯಾಗಿದ್ದಾರೆ ಎಂದು ಆರ್‌.ಅಶೋಕ ಹೇಳಿದರು.

PREV
Read more Articles on

Recommended Stories

ಗ್ಯಾರಂಟಿಗಳಿಂದ ಜೀವನ ಭಾರಿ ಸುಧಾರಣೆ ! ಅಧ್ಯಯನ ವರದಿ
ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ